ಪೋರ್ಟ್ ಬ್ಲೇರ್: ಅಂಡಮಾನ್ (Andaman) ಮತ್ತು ನಿಕೋಬಾರ್‌ನಲ್ಲಿ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡ 360 ಶತಕೋಟಿ ರೂ. ಮೌಲ್ಯದ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಮಾಹಿತಿ ಕಲೆ ಹಾಕಲು ಅಂಡಮಾನ್ ಪೊಲೀಸರು ಎಲೋನ್ ಮಸ್ಕ್‌ನ (Elon Musk) ಸ್ಟಾರ್‌ಲಿಂಕ್ (Starlink) ಮೊರೆ ಹೋಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸಮುದ್ರ ಗಡಿಗೆ ಮಾದಕವಸ್ತು ತರಲು ಆರೋಪಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸಾಧನವನ್ನು ಬಳಸಿದ್ದಾರೆ. ಅವರ ಮಾಹಿತಿ ಕಲೆಹಾಕಲು ಪೊಲೀಸರು ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲಿದ್ದಾರೆ ಎಂದು ಅಂಡಮಾನ್ ದ್ವೀಪದ ಉನ್ನತ ಪೊಲೀಸ್ ಅಧಿಕಾರಿ ಹರಗೋಬಿಂದರ್ ಎಸ್. ಧಲಿವಾಲ್ ತಿಳಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಮ್ಯಾನ್ಮಾರ್ ಬೋಟ್‌ನಲ್ಲಿ ಸಾಗಿಸುತ್ತಿದ್ದ 6,000 ಕೆಜಿ ಗಿಂತ ಹೆಚ್ಚಿನ ಮಾದಕ ವಸ್ತು ಮೆತ್‌ನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಆರು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಮೊದಲ ಬಾರಿಗೆ ಸ್ಟಾರ್‌ಲಿಂಕ್‌ನ ಸಾಧನವನ್ನು ಭಾರತೀಯ ಜಲಭಾಗವನ್ನು ತಲುಪಲು ಆರೋಪಿಗಳು ಬಳಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಇಂಟರ್‌ನೆಟ್ ಒದಗಿಸುತ್ತದೆ. ಅಲ್ಲದೇ ಅಂತರರಾಷ್ಟ್ರೀಯ ಸಂಪರ್ಕವನ್ನು ಇದು ಒದಗಿಸುತ್ತದೆ. ಈ ಸಾಧನವನ್ನು ಯಾರು ಮತ್ತು ಯಾವಾಗ ಖರೀದಿಸಿದ್ದಾರೆ ಎಂದು ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ.