Bengaluru CityDistrictsKarnatakaLatestMain Post

ಅನಂತ ಪ್ರೇರಣಾ ಕೇಂದ್ರ ನಾಳೆ ಲೋಕಾರ್ಪಣೆ

– ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಆದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶ
– ಸೌತ್ ಎಂಡ್ ವೃತ್ತದಲ್ಲಿದ್ದ ಅನಂತಕುಮಾರ್ ಕಚೇರಿಯನ್ನು ‘ಅನಂತ ಪ್ರೇರಣಾ ಕೇಂದ್ರ’ ವನ್ನಾಗಿ ಪರಿವರ್ತನೆ
– ಮೇ6 ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟನೆ – ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಭಾಗಿ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ರಚಿಸಲಾಗಿರುವ ಅನಂತ ಪ್ರೇರಣಾ ಹೆಸರಿನ ಮಾಹಿತಿ ಕೇಂದ್ರ ಮೇ 6, 2022 ರಂದು ಬೆಳಿಗ್ಗೆ 10.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ನಾಡಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವ ಶಕ್ತಿಗಳಿಗೆ ದಾರಿದೀಪವಾಗಲೆಂಬ ಸದುದ್ದೇಶದಿಂದ ಸೌತ್ ಎಂಡ್ ವೃತ್ತದಲ್ಲಿ ಈ ಹಿಂದೆ ಇದ್ದ ಅನಂತಕುಮಾರ್ ಅವರ ಕಚೇರಿಯನ್ನು ‘ಅನಂತ ಪ್ರೇರಣಾ ಕೇಂದ್ರ’ ವನ್ನಾಗಿಸಲಾಗಿದೆ. ಅನಂತಕುಮಾರರ ಬದುಕಿನ ಸಾರ್ಥಕತೆಯನ್ನು ಅರಿತವರಿಗೂ, ನಾಯಕತ್ವದ ಬೆಳವಣಿಗೆಯ ರೂಪರೇಷೆಯನ್ನು ಗುರುತಿಸಲೆಳಸುವವರಿಗೂ, ನಾಡ ಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವಶಕ್ತಿಗಳಿಗೂ ದಾರಿದೀಪವಾಗಲೆಂಬ ಮಹದುದ್ದೇಶದಿಂದ ಅನಂತಕುಮಾರರ ಜೀವನ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ ಮಾಹಿತಿ ಕೇಂದ್ರವೊಂದನ್ನು ತೆರೆಯಲಾಗಿದೆ. ಅನಂತಕುಮಾರರ ಆಶೋತ್ತರಗಳನ್ನು ಮುಂದುವರಿಸಿ ನಿರ್ವಹಿಸುವ ಹೊಣೆ ಹೊತ್ತ ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ಈ ಕೇಂದ್ರವು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಕಲಿ ಅಧಿಕಾರಿಗಳಿಂದ ಹಣ ವಸೂಲಿ – ಕರೆ ಬಂದರೆ ದೂರು ದಾಖಲಿಸುವಂತೆ ಎಸಿಬಿ ಪ್ರಕಟಣ

ಅನಂತ ಪ್ರೇರಣಾ ಕೇಂದ್ರದ ಅಂಶಗಳು:
ಛಾಯಾಚಿತ್ರ ಪ್ರದರ್ಶಿನಿ:
ಈ ಪ್ರೇರಣಾ ಕೇಂದ್ರದಲ್ಲಿ ಅನಂತಕುಮಾರ್ ಅವರ ಬಾಲ್ಯದಿಂದ ಮೊದಲುಗೊಂಡು ಎಬಿವಿಪಿ ಕಾರ್ಯಕರ್ತರಾಗಿ ಅವರು ಗಳಿಸಿಕೊಂಡ ಅನುಭವ. ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಬೆಳೆಯಲು ಅವರು ದುಡಿದ ಪರಿ, ಆರು ಬಾರಿ ಸಂಸದರಾಗಿ, ಕೇಂದ್ರದಲ್ಲಿ ವಿವಿಧ ಖಾತೆಗಳ ಸಚಿವರಾಗಿ ಅನಂತಕುಮಾರ್ ಸಾಧಿಸಿದ ಕಾರ್ಯಗಳು, ಅಚ್ಚರಿ ಮೂಡಿಸುವಂತೆ ಅವರು ನಾಯಕತ್ವದ ಸೋಪಾನಗಳನ್ನು ಏರಿ ನಿಂತ ರೀತಿ ಎಲ್ಲವನ್ನೂ ಛಾಯಾಚಿತ್ರಗಳ ಮೂಲಕ ಪ್ರದರ್ಶನದ ಮೂಲಕ ಪರಿಚಯಿಸಲಾಗುತ್ತಿದೆ. ಈ ಚಿತ್ರಗಳನ್ನು ಸವಿವರ ಅರ್ಥಮಾಡಿಕೊಳ್ಳಲು ಧ್ವನಿರೂಪದ ವ್ಯಾಖ್ಯಾನವುಳ್ಳ ಮೊಬೈಲ್ ಆಪ್ ಸೌಕರ್ಯವನ್ನೂ ವ್ಯವಸ್ಥೆಮಾಡಲಾಗುತ್ತಿದೆ.

ಗ್ರಂಥಭಂಡಾರ ಮತ್ತು ವಾಚನಾಲಯ:
ಅನಂತಪ್ರೇರಣಾ ಕೇಂದ್ರದ ಒಂದು ಭಾಗದಲ್ಲಿ ಸುಸಜ್ಜಿತ ಗ್ರಂಥಭಂಡಾರ ಮತ್ತು ಉಚಿತ ವಾಚನಾಲಯವನ್ನು ವ್ಯವಸ್ಥೆಮಾಡಲಾಗಿದೆ. ಸಾರ್ವಜನಿಕರೂ ವಿದ್ಯಾರ್ಥಿಗಳೂ ಇವುಗಳ ಪ್ರಯೋಜನ ಪಡೆದುಕೊಳ್ಳಬಹುದು. ಇಲ್ಲಿ ಅನಂತಕುಮಾರರ ಸ್ವಂತ ಸಂಗ್ರಹದಿಂದಲೂ ಇತರ ಮೂಲಗಳಿಂದಲೂ ಸಂಗ್ರಹಿಸಿದ ಉಪಯುಕ್ತ ಪುಸ್ತಕಗಳನ್ನು ಇಲ್ಲಿಯೇ ಉಚಿತವಾಗಿ ಅಧ್ಯಯನ ಮಾಡಲು ಅವಕಾಶವಿದೆ. ಮುಂದೆ, ಉದ್ಯೋಗಾಪೇಕ್ಷಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಪ್ರತ್ಯೇಕ ವಿಭಾಗವನ್ನು ತೆರೆಯುವ ಉದ್ದೇಶವೂ ಇದೆ. ಇದನ್ನೂ ಓದಿ: ವಿದ್ಯುತ್ ಸಮಸ್ಯೆ – 1,100 ರೈಲುಗಳು ರದ್ದು

ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ:
ಸೌತ್ ಎಂಡ್ ವೃತ್ತದ ಪರಿಸರದಲ್ಲಿ ಅನೇಕ ಶಿಕ್ಷಣಸಂಸ್ಥೆಗಳಿದ್ದು ದೂರದೂರದಿಂದ ಇಲ್ಲಿಗೆ ಪ್ರತಿನಿತ್ಯ ಅನೇಕ ವಿದ್ಯಾರ್ಥಿಗಳು ಬರುತ್ತಾರೆ. ಇವರಲ್ಲಿ ಅನೇಕರಿಗೆ ಮಧ್ಯಾಹ್ನದ ಊಟಕ್ಕೆ ಬೇಕಾದ ಅನುಕೂಲವಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಅದಮ್ಯ ಚೇತನದ ಸಹಯೋಗದೊಡನೆ ಪ್ರತಿನಿತ್ಯ ಮಧ್ಯಾಹ್ನದ ಭೋಜನವನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರೇರಣಾ ಕೇಂದ್ರದ ಮೇಲುಮಹಡಿಯ ಆವರಣದಲ್ಲಿ ಊಟದ ವಿತರಣೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಗಿಡ ವಿತರಣೆ:
ಸಸ್ಯಾಗ್ರಹ ಎಂಬ ಪರಿಕಲ್ಪನೆಯನ್ನು ಮುಂದಿಟ್ಟು ಅನಂತಕುಮಾರ್ ಬೆಂಗಳೂರು ಹಸಿರು ಪರಿಸರದ ಸ್ವಚ್ಛ ನಗರವಾಗಬೇಕೆಂಬ ಕನಸು ಕಂಡಿದ್ದವರು. ಅವರು ಪ್ರಾರಂಭಿಸಿದ ಹಸಿರು ಭಾನುವಾರ ಎಂಬ ಗಿಡ ನೆಡುವ ಕಾರ್ಯಕ್ರಮ 350 ಕ್ಕೂ ಹೆಚ್ಚು ವಾರಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತಮ್ಮ ಆವರಣದಲ್ಲಿ ಗಿಡ ನೆಟ್ಟು ಬೆಳೆಸಲು ಆಸಕ್ತಿಯುಳ್ಳ ಸಾರ್ವಜನಿಕರಿಗೆ ಗಿಡಗಳನ್ನು ಉಚಿತವಾಗಿ ವಿತರಿಸಲು ಪ್ರೇರಣಾ ಕೇಂದ್ರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ಲೇಟ್ ಬ್ಯಾಂಕ್:
ಹಸಿರು ಜೀವನ ಶೈಲಿಯ ಪ್ರತಿಪಾದಕರಾದ ಅನಂತಕುಮಾರ್ ಸಭೆ ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಖರೀದಿಯನ್ನು ವಿರೋಧಿಸಿ, ಮರುಬಳಸಬಹುದಾದ ಸ್ಟೀಲ್ ಲೋಟ ತಟ್ಟೆ ಚಮಚಗಳ ಬಳಕೆಗೆ ಪ್ರೇರಣೆ ನೀಡಿದ ಫಲವಾಗಿ ಅದಮ್ಯ ಚೇತನದಲ್ಲಿ ಪ್ಲೇಟ್ ಬ್ಯಾಂಕ್ ಯೋಜನೆ ಪ್ರಾರಂಭವಾಗಿದೆ. ಸಾರ್ವಜನಿಕರು ತಾವು ಏರ್ಪಡಿಸುವ ಸಮಾರಂಭಗಳಲ್ಲಿ ಬಳಕೆಗೆ ಇಲ್ಲಿಂದ ಲೋಟ ತಟ್ಟೆಗಳನ್ನು ಉಚಿತವಾಗಿ ಒಯ್ದು ಉಪಯೋಗಿಸಿ ಹಿಂತಿರುಗಿಸಬಹುದಾದ ಷರತ್ತು ಬದ್ಧ ಯೋಜನೆ ಇದಾಗಿದೆ. ಪ್ಲೇಟ್ ಬ್ಯಾಂಕಿನ ಒಂದು ಶಾಖೆಯನ್ನು ಪ್ರೇರಣಾ ಕೇಂದ್ರದ ಆವರಣದಲ್ಲಿ ತೆರೆಯಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಸ್ತು

ಸಂಸ್ಕೃತಿ-ಪರಂಪರೆ ಪ್ರಸಾರ:
ಭಾರತೀಯ ಪರಂಪರೆ, ಸಂಸ್ಕೃತಿ, ಕಲೆ ಮೊದಲಾದವುಗಳ ಬಗ್ಗೆ ಅಪಾರ ಆಸಕ್ತಿಯುಳ್ಳವರಾಗಿದ್ದ ಅನಂತಕುಮಾರರ ಆಶಯಕ್ಕನುಗುಣವಾಗಿ ಈ ಪ್ರೇರಣಾ ಕೇಂದ್ರದಲ್ಲಿ ಮುಂಬರುವ ದಿನಗಳಲ್ಲಿ ಸಂಸ್ಕೃತಿ ಘಟಕವೊಂದನ್ನು ಪ್ರಾರಂಭಿಸಲು ಯೋಚಿಸಲಾಗುತ್ತಿದೆ. ಈ ಘಟಕವು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

ದೇಶೀಯ ಪರಿಸರಸ್ನೇಹಿ ವಸ್ತುಬಳಕೆಗೆ ಪ್ರೋತ್ಸಾಹ:
ದೇಶೀಯವೂ ಪರಿಸರಕ್ಕೆ ಪೂರಕವೂ ಮರುಬಳಕೆಗೆ ಅವಕಾಶವೂ ಇರುವಂತಹ ಕಚ್ಚಾವಸ್ತುಗಳಿಂದ ತಯಾರಾದ ಬಟ್ಟೆ ಚೀಲಗಳು ಮತ್ತಿತರ ದಿನನಿತ್ಯದ ಬಳಕೆಯ ಸಾಮಗ್ರಿಗಳ ತಯಾರಿಕೆ ಮತ್ತು ಖರೀದಿಯನ್ನು ಪ್ರೋತ್ಸಾಹಿಸಲು ಅನಂತಪ್ರೇರಣಾಕೇಂದ್ರದ ಆವರಣದಲ್ಲಿ ವಾರಕ್ಕೊಮ್ಮೆ ಅಂತಹ ವಸ್ತುಗಳ ಮಾರಾಟಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ.

ಈ ಪ್ರೇರಣಾ ಕೇಂದ್ರದ ಉದ್ಘಾಟನೆಯು ಶುಕ್ರವಾರ(ಮೇ 6, 2022 ರಂದು) ಬೆಳಿಗ್ಗೆ 10.30 ಕ್ಕೆ ನಡೆಯಲಿದ್ದು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published.

Back to top button