– ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ: ಸಂಸದ
ಕಾರವಾರ: ನಾನು ಇರೋತನಕ ಕಾಂಗ್ರೆಸ್‌ಗೆ (Congress) ನೆಮ್ಮದಿ ಕೊಡೋದಿಲ್ಲ, ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ, ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ ಎಂದು ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.
ಕಾರವಾರದ ಬಿಜೆಪಿ (BJP) ಕಚೇರಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ ಎಂದು ಕುಟುಕಿದ್ದಾರೆ.
ಕ್ರಾಂತಿ ಆದ್ರೇನೆ ಶಾಂತಿ ಸಿಗೋದು:
ದೇಶವನ್ನ ಲೂಟಿ ಮಾಡಿದ್ದು ಕಾಂಗ್ರೆಸ್, ಮಹಿಳಾ ವಿರೋಧಿ ಕಾಂಗ್ರೆಸ್, ಈ ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನ ನೋಡಿದ್ರೆ ಯಾರಿಗೂ ನಿದ್ದೆ ಬರಲ್ಲ. ವೈಯಕ್ತಿಕ ಬದುಕಿರಲಿ, ರಾಜಕೀಯವಿರಲಿ ನೀತಿ, ನಿಯತ್ತು ಇರಲೇಬೇಕು. ಇಲ್ಲವಾದಲ್ಲಿ ವ್ಯಕ್ತಿತ್ವ ಬೆಳೆಯೋದಕ್ಕೆ ಸಾಧ್ಯವೇ ಇಲ್ಲ. ದೇಶದ ನೀತಿ, ನೀಯತ್ತನ್ನ ಕುಲಗೆಡಿಸಿದ್ದೇ ಕಾಂಗ್ರೆಸ್ (Congress), ಅವರಿಗೆ ನೀತಿ ಇಲ್ಲ, ನೀಯತ್ತಂತೂ ಮೊದಲೇ ಇಲ್ಲ. ಕ್ರಾಂತಿ ಆದ್ರೇನೆ ಶಾಂತಿ ಸಿಗೋದು ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಜಿ20 ಕಾರ್ಯಕ್ರಮದ ಬಳಿಕ ಇಡೀ ಜಗತ್ತೇ ಭಾರತವನ್ನ ಹೊಗಳಿತು, ಆದ್ರೆ ರಾಹುಲ್ ಗಾಂಧಿ ಎಲ್ಲಿದ್ರು ಯಾರಿಗೂ ಗೊತ್ತಿಲ್ಲ. ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ. ಪ್ರಬಲ ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ಇಲ್ಲ, ನೈತಿಕವಾಗಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲ, ಸಂಘಟನಾತ್ಮಕವಾಗಿಯೂ ಇಲ್ಲ. ಪ್ರಧಾನಿ ಮೋದಿ (Narendra Modi) ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಅಧಿಕಾರ ಮಾಡಿತ್ತು. ಕುರುಡರಿಗೆ ಯಾವತ್ತೂ ಹೆಚ್ಚಿಗೆ ತಿಳಿಸಬೇಕಾದ ಅವಶ್ಯಕತೆ ಇರೋದಿಲ್ಲ, ಆದ್ರೆ ಪೂರ್ವಾಗ್ರಹ ಪೀಡಿತ ಕುರುಡರಿಗೆ ಹೇಳಿದ್ರೂ ಒಪ್ಪೋದಿಲ್ಲ, ಸತ್ಯ ಎದ್ದು ಕೂರುವಾಗ, ಒಳಗೆ ಸುಳ್ಳು ಇಡೀ ಜಗತ್ತನ್ನ ಓಡಾಡಿಕೊಂಡು ಬಂದ್ದಿತ್ತಂತೆ, ಹಾಗೇ ಕಾಂಗ್ರೆಸ್ ಅವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ನಿಜಕ್ಕೂ ಸಿದ್ರಾಮಯ್ಯ ಅವರಿಗೆ ಧಮ್ ಇದ್ರೆ ಕರ್ನಾಟಕದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಹೊರಡಿಸಲಿ, ಕಾಂಗ್ರೆಸ್ ಸರ್ಕಾರದಲ್ಲಿ ಎಂಎಲ್‌ಎಗಳಿಗೆ ಕೊಡಲೂ ದುಡ್ಡಿಲ್ಲ, ಇಂತಹ ದಯನೀಯ ಸ್ಥಿತಿಯನ್ನು ಕಾಂಗ್ರೆಸ್ ಒಂದು ವರ್ಷದಲ್ಲಿ ತಂದಿಟ್ಟಿದೆ. ಆದ್ರೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಯಾರೇ ಇರಲಿ ಬಿಜೆಪಿ ಗೆಲುವು ಸಾಧಿಸಬೇಕು ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಬಿಜೆಪಿಗೆ ಮತ ನೀಡಲು ಸಿದ್ಧರಿದ್ದಾರೆ. ಹಾಗಾಗಿ ನಮ್ಮ ಪಕ್ಷದಿಂದ 21 ಜನ ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ್ರು, ಕಾಂಗ್ರೆಸ್ ನಲ್ಲಿ ಈವರೆಗೂ ಯಾರೂ ಅರ್ಜಿ ಹಾಕಿಲ್ಲ ಎಂದರು.