ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಅನಂತ್‍ಕುಮಾರ್ ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್- ಸಂಸದೀಯ ಸಭೆಗೆ ನಿಷೇಧ
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ದೆಹಲಿಯ ಲೋಧಿ ಎಸ್ಟೇಟ್‍ನಲ್ಲಿರುವ ಹೆಗ್ಡೆ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆರಳಿದ್ದು, ಕ್ಷಮೆ ಕೇಳುವಂತೆ ಮನವೋಲಿಸಲು ಪ್ರಯತ್ನಿಸಿದರು. ಸುಮಾರು ಅರ್ಧ ಗಂಟೆಯ ಸಂಧಾನದ ಬಳಿಕವೂ ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಟೀಲ್ ನಿವಾಸದಿಂದ ವಾಪಸ್ಸಾಗಿದ್ದಾರೆ.
Advertisement
Advertisement
ವಿವಾದಾತ್ಮಕ ಹೇಳಿಕೆಯಿಂದ ಹೈಕಮಾಂಡ್ ಗರಂ ಆಗಿದೆ, ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವಂತೆ ಕಟೀಲ್ ಸೂಚಿಸಿದರು ಎನ್ನಲಾಗಿದೆ. ಆದರೆ ಹೆಗ್ಡೆ ಮಾತ್ರ ಹೈಕಮಾಂಡ್ ನೀಡಿದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡಿದ್ದೇನೆ. ನಾನು ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ ಎಂದಿದ್ದಾರಂತೆ.
Advertisement
ಸಭೆ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಎಂದಿನಂತೆ ಭೇಟಿ ಮಾಡಿ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜಕೀಯ ಸ್ನೇಹಿತನಾಗಿ ಹೆಗ್ಡೆ ನಿವಾಸಕ್ಕೆ ಬಂದಿದ್ದೇನೆ. ಗಾಂಧಿಜೀ ಬಗ್ಗೆ ನೀಡಿದ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿದೆ. ಈ ಬಗ್ಗೆ ಹೈಕಮಾಂಡ್‍ಗೆ ಅನಂತ ಕುಮಾರ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತೆ ಎಂದರು. ಕ್ಷಮೆ ಕೇಳುವ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಉತ್ತರಿಸಲು ನಿರಾಕರಿಸಿದರು.