ಕೊಪ್ಪಳ: ಮದುವೆ (Marriage) ಸ್ವರ್ಗದಲ್ಲಿ ನಿಶ್ವಯವಾಗಿರುತ್ತದೆ ಎಂಬುದು ಭಾರತೀಯರ ನಂಬಿಕೆ. ಈಗ ಗಂಗಾವತಿಯಲ್ಲಿ (Gangavathi) ನಡೆದ ಮದುವೆಯೊಂದು ಈ ನಂಬಿಕೆಯನ್ನು ಪುಷ್ಠೀಕರಿಸಿದೆ.
ಕೊಪ್ಪಳ (Koppal) ಜಿಲ್ಲೆ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ನಿವಾಸಿ ಮುರಳಿ ಎಂಬ ಯುವಕ, ಲಂಡನ್‌ನ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಬ ಯುವತಿಯ ಕೈ ಹಿಡಿದಿದ್ದಾನೆ. ಗಂಗಾವತಿಯ ವಿವಾಹ ನೋಂದಣಿ ಕಚೇರಿಯಲ್ಲಿ ನವ ಜೋಡಿ, ಶುಕ್ರವಾರ ತಮ್ಮ ಮದುವೆ ನೋಂದಣಿ ಮಾಡಿಸಿದ್ದಾರೆ. ಪ್ರೀತಿಸಿ ಮದುವೆ ಆಗಿರುವ ಇವರ ಬಂಧನಕ್ಕೆ ಸರ್ಕಾರದ ಮುದ್ರೆ ಬಿದ್ದಿದೆ. ಯುವಕ ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ ಹಾಗೂ ಗೆಸ್ಟ್ ಹೌಸ್ ಮಾಲಿಕನಾಗಿದ್ದು, ಇದೀಗ ಸಿನಿಮಾ ಕತೆ ಬರೆಯುತ್ತಿದ್ದಾನೆ. ಯುವತಿ ಕೂಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ: ನಿಮ್ಮೂರಲ್ಲಿ ಮಳೆಯಿಂದ ಸಮಸ್ಯೆ ಆಗಿದೆಯೇ? – 8 ಜಿಲ್ಲೆಗೆ ವಾಟ್ಸಪ್ ಸಹಾಯವಾಣಿ ಸಂಖ್ಯೆ ಬಿಡುಗಡೆ
ಗಂಗಾವತಿಯ ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ಚಾರ್ಲೊಟ್ಟೆ ಮೇರಿ ಫಿಂಕ್ಲರ್, ಬಿಳಿ ಸೀರೆಯಲ್ಲಿ ಭಾರತೀಯ ನಾರಿಯಂತೆಯೇ ಕಾಣಿಸುತ್ತಿದ್ದರು. ಇತ್ತ ಮುರಳಿ, ತಮ್ಮ ಆಪ್ತರೊಂದಿಗೆ ಸಾದಾ ಸೀದಾ ವಸ್ತ್ರದಲ್ಲಿ ಕಚೇರಿಗೆ ಆಗಮಿಸಿದ್ದರು. ನೋಂದಣಿ ಬಳಿಕ ಅಲ್ಲಿದ್ದ ಜನರಿಗೆ ಧಾರವಾಡದ ಪೇಡಾ, ಕಾಜು ಬರ್ಫಿ ಹಂಚಿ ಸಂತಸ ಹಂಚಿಕೊಂಡರು.
ಲಂಡನ್‌ನಲ್ಲಿ ಆರತಕ್ಷತೆ: ಯುವಕ ಪ್ರವೃತ್ತಿಯಲ್ಲಿ ಸಿನಿಮಾ ನಿರ್ಮಾಣ, ನಿರ್ದೇಶನದ ಕನಸು ಹೊತ್ತವರು. ಅತ್ತ ಯುವತಿ ಕೂಡ ಸಿನಿಮಾಗಳಿಗೆ ಕತೆ ಬರೆಯುವ ಹವ್ಯಾಸ ಉಳ್ಳವರು. ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಯುವತಿ, ಮುರುಳಿ ನಿರ್ಮಾಣ ಮಾಡುತ್ತಿದ್ದ ‘ಐ ಲವ್ ಮೈ ಕಂಟ್ರಿ’ ಎಂಬ ಕಿರುಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪರಿಚಯವಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿ ಅಂಕುರಿಸಿತ್ತು. ಈ ಜೋಡಿ ಗಂಗಾವತಿಯಲ್ಲಿ ಮದುವೆ ಆಗಿದ್ದು, ಮೇ 9ರಂದು ಲಂಡನ್‌ನಲ್ಲಿ ಅಲ್ಲಿನ ಸಂಪ್ರದಾಯದಂತೆ ಆರತಕ್ಷತೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಇಂಡಿಯಾ ವೆಡ್ಸ್ ಲಂಡನ್: ಮೇ 9ರಂದು ಆರತಕ್ಷತೆ ನಡೆಯುವ ದಿನ ‘ಇಂಡಿಯಾ ವೆಡ್ಸ್ ಲಂಡನ್’ ಎಂಬ ಕಿರುಚಿತ್ರವನ್ನು ಈ ಜೋಡಿ ಬಿಡುಗಡೆ ಮಾಡಲಿದೆ. ಇಬ್ಬರೂ ಸೇರಿ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಈ ಇಬ್ಬರು ಸೇರಿ, ‘ಡ್ರೀಮ್ ಸ್ಪೇಸ್’ ಎನ್ನುವ ಕಿರುಚಿತ್ರ ತೆಗೆದಿದ್ದರು. ಇದಕ್ಕೆ ಮೂರು ಪ್ರಶಸ್ತಿ ಸಿಕ್ಕಿವೆ. ಹಾಗೂ ಇವರಿಬ್ಬರು ಹೈದರಾಬಾದ್‌ನಲ್ಲಿ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಾಗಿರುವ ಜೀವನ್‌ರೆಡ್ಡಿ ಎಂಬುವವರ ಬಳಿ ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ. ಯುವತಿ ಸದ್ಯ ‘ಸಿಂಗರೇಣಿ ಜಂಗ್ ಸೈರನ್ ಎಂಬ ತೆಲುಗು ಚಿತ್ರಕ್ಕೆ ಕತೆ ಬರೆಯುತ್ತಿದ್ದಾರೆ. ಇಂಗ್ಲೀಷ್‌ನಲ್ಲಿ ಬರೆದ ಕತೆಯನ್ನು ಮುರಳಿ ತೆಲುಗಿಗೆ ಅನುವಾದಿಸಿ ಕೊಡುತ್ತಿದ್ದಾರೆ. ತಮ್ಮದೇ ಸ್ವಂತ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಗುರಿ ಹೊಂದಿದ್ದಾರೆ. ಇದನ್ನೂ ಓದಿ: 70 ಜನರನ್ನು ಕೆಲಸದಿಂದ ತೆಗೆದು – 67 ಮಂದಿಗೆ ಬೇರೆ ಕಡೆ ಕೆಲಸ ಸಿಗಲು ಸಹಾಯ ಮಾಡಿದ ಬೆಂಗ್ಳೂರು ಕಂಪನಿ ಸಿಇಒ!