ಚಿಕ್ಕಮಗಳೂರು: ಗುಡ್ಡ ಕುಸಿತದಿಂದ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ರಕ್ಷಣೆ ಮಾಡಿ, ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆ ಹೊತ್ತು ಸಾಗಿ ರಕ್ಷಿಸಿದೆ.
ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿತ್ತು. ಹೀಗಾಗಿ ಮನೆಯಿಂದ ಸುರಕ್ಷಿತ ಪ್ರದೇಶಗಳಿಗೆ ಹೋಗಲು ಆಗದೇ ಕಂಗಾಲಾಗಿದ್ದರು. ಕಳೆದ 6 ದಿನಗಳಿಂದ 10ಕ್ಕೂ ಮಂದಿ ಗ್ರಾಮಸ್ಥರು ಸಂಕಷ್ಟದಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬೆಳಿಗ್ಗೆ 7.30ರಿಂದ ಯೋಧರು ಕಾರ್ಯಾಚರಣೆ ನಡೆಸಲು ಆರಂಭಿಸಿದರು. ಕಷ್ಟಪಟ್ಟು 10ಕ್ಕೂ ಹೆಚ್ಚು ಜನರನ್ನ ಸೇನಾಪಡೆ ರಕ್ಷಣೆ ಮಾಡಿದ್ದು, ಅವರೊಂದಿಗೆ ಸ್ಥಳೀಯ ಯುವಕರು ಕೂಡ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
Advertisement
Advertisement
ಸಂತ್ರಸ್ತರಲ್ಲಿ 4 ಮಂದಿಗೆ ಅನಾರೋಗ್ಯ ಸಮಸ್ಯೆ ಎದುರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿಸಲು ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಸೇನಾಪಡೆಯ ಯೋಧರೇ ಸುಮಾರು 5 ಕಿ.ಮೀ ದೂರದವರೆಗೂ ರೋಗಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರ ಜೀವ ಉಳಿಸಿದ ಸೇನಾಪಡೆಗೆ ನಾವೆಂದು ಚಿರಋಣಿ ಎಂದು ಗ್ರಾಮಸ್ಥರು ಯೋಧರಿಗೆ ನಮಿಸಿದ್ದಾರೆ.