ಜೀವನದಲ್ಲಿ ಆಸಕ್ತಿ , ಗುರಿ , ಛಲ ಇದ್ದರೆ ಖಂಡಿತ ದಡ ಸೇರಬಹುದು ಎಂಬ ನಂಬಿಕೆಯೊಂದಿಗೆ ಯುವ ಪ್ರತಿಭೆಗಳ ಸೇರಿಕೊಂಡು ʻಅಮೃತ ಅಂಜನ್ʼ ಎಂಬ ಶಾರ್ಟ್ ಫಿಲಂ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇದೇ ತಂಡ ಅಮೃತ ಅಂಜನ್ ಎನ್ನುವ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಒಂದು ಮನಮುಟ್ಟುವ ಭಾವನಾತ್ಮಕ ಹಾಡೊಂದು ಬಿಡುಗಡೆ ಮಾಡಲು ಜಿಟಿ ಮಾಲ್‌ನಲ್ಲಿರುವ ಉತ್ಸವ್ ಲಗೇಸಿಯಲ್ಲಿ ಆಯೋಜನೆ ಮಾಡುವುದರ ಜೊತೆಗೆ ಮಾಧ್ಯಮದೊಂದಿಗೆ ಚಿತ್ರದ ಕುರಿತು ಮಾಹಿತಿಯನ್ನ ಹಂಚಿಕೊಳ್ಳಲು ತಂಡ ಸಿದ್ಧತೆ ನಡೆಸಿತು. ಅದೇ ರೀತಿ ಹಾಡು ಬಿಡುಗಡೆ ನಂತರ ಚಿತ್ರತಂಡ ಪತ್ರಿಕಾಗೋಷ್ಠಿಗೆ ಹಾಜರಾದ್ದರು.
ಇನ್ನು ಮೊದಲಿಗೆ ಈ ಚಿತ್ರದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡುತ್ತಾ, ನಾನು ಈ ಹಿಂದೆ ಸೋಡಾ ಬುಡ್ಡಿ ಎಂಬ ಚಿತ್ರವನ್ನ ಮಾಡಿದ್ದೆ. ಇದು ನನ್ನ 2ನೇ ಚಿತ್ರ. ಈ ಸಿನಿಮಾ ಆರಂಭಿಸುವುದಕ್ಕೆ ನನ್ನ ಅಮೃತ ಅಂಜನ್ ಕಿರುಚಿತ್ರವೇ ಕಾರಣ. ಈ ಚಿತ್ರದ ಟೈಟಲ್ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ವಿ. ಹಾಗಾಗಿ ಅಮೃತ ಅಂಜನ್ ಎಂಬ ಹೆಸರಿನೊಂದಿಗೆ ಚಿತ್ರ ನಿರ್ಮಾಣ ಮಾಡಿದ್ದು, ಇದೊಂದು ಕಂಪ್ಲೀಟ್ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು 80 ಪರ್ಸೆಂಟ್ ಹಾಸ್ಯ, 20 ಪರ್ಸೆಂಟ್ ಸೆಂಟಿಮೆಂಟ್ ಅಂಶಗಳ ಒಳಗೊಂಡಿದ್ದು, ಸಂಪೂರ್ಣ ಮನೋರಂಜನೆ ಈ ಚಿತ್ರ ನೀಡಲಿದೆ. ನಮ್ಮ ಚಿತ್ರದಲ್ಲಿ ಒಟ್ಟು ಎರಡೂವರೆ ಹಾಡು ಇದೆ ಎನ್ನುತ್ತಾ, ಇಂದು ಬಿಡುಗಡೆ ಮಾಡಿರುವ ಭಾವನಾತ್ಮಕ ಹಾಡಿಗೆ ಮುಖ್ಯ ಕಾರಣವೇ ನಮ್ಮ ತಾಯಿ ತಂದೆ. ನಾನು ಬಾಲ್ಯದಲ್ಲಿ ಕಂಡಂತಹ ಒಂದು ಸತ್ಯದ ಅಂಶ. ನಮ್ಮ ತಾಯಿಗೆ ತಂದೆ ತುಂಬಾ ಟಾರ್ಚರ್ ಕೊಡ್ತಾ ಇದ್ರು, ಆ ಪ್ರೇರಣೆಯಿಂದ ಈ ಹಾಡು ಮಾಡಿದ್ದೇನೆ. ನೈಜಕ್ಕೆ ಪೂರಕವಾಗಿ ಬರಬೇಕೆಂದು ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಈ ಹಾಡಿನಲ್ಲಿ ನಟಿಸಿರುವ ಹಿರಿಯ ನಟ ನವೀನ್. ಡಿ. ಪಡೀಲ್ ತಂದೆಯಾಗಿ ಹಾಗೂ ಮಧುಮತಿ ತಾಯಿಯ ಪಾತ್ರವನ್ನ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಹಾಡನ್ನ ವೆಂಕಟೇಶ್ ಕುಲಕರ್ಣಿ ಬರೆದಿದ್ದಾರೆ. ನಮ್ಮ ಸಿನಿಮಾದಲ್ಲಿ ಎಲ್ಲಾ ರೀತಿಯ ಅಂಶಗಳ ಜೊತೆ ಹೊಸ ಕಂಟೆಂಟ್ ಒಳಗೊಂಡಿದೆ ಎಂದರು.
ಈ ಸಿನಿಮಾ ಗೆಲ್ಲಲೇಬೇಕು, ಒಂದು ವೇಳೆ ಸಿನಿಮಾ ಸೋತರೆ ನಾನು ಸಿನಿಮಾ ಮಾಡಲ್ಲ. ಈ ಸಿನಿಮಾ ಪ್ರಚಾರಕ್ಕಾಗಿ ಹಿರಿಯ ಸ್ಟಾರ್ ನಟರನ್ನ ಭೇಟಿ ಮಾಡಿದರು ಯಾವುದೇ ಪ್ರಯೋಜನ ಆಗಲಿಲ್ಲ. ಆದರೂ ಪರ್ವಾಗಿಲ್ಲ ನಮ್ಮ ತಂಡಕ್ಕೆ ಹಿರಿಯ ವಿತರಕರು ಸಾಥ್ ನೀಡಿದ್ದು, ಜಯಣ್ಣ ಫಿಲಂ ಮೂಲಕ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ನಟ ಗೌರವ ಶೆಟ್ಟಿ ಮಾತನಾಡುತ್ತಾ, ನಾನು ಈ ಚಿತ್ರದಲ್ಲಿ ಒಂದು ಕುಡುಕನ ಪಾತ್ರ ಮಾಡಿದ್ದು, ನನ್ನ ಹೆಂಡತಿ ಪಾತ್ರದಾರಿ ಈ ಚಟ ಬಿಡಿಸಲು ಏನೆಲ್ಲ ಮಾಡ್ತಾಳೆ ಅನ್ನೋದು ನಮ್ಮ ಸಿನಿಮಾದಲ್ಲಿ ಇದೆ. ನಮ್ಮ ಸಿನಿಮಾ ರೀಚ್ ಆಗಕ್ಕೆ ನಿಮ್ಮ ಸಪೋರ್ಟ್ ಖಂಡಿತ ಬೇಕು. ನಮಗೆ ಸ್ಟಾರ್ ನಟರು ಪ್ರಮೋಷನ್‌ಗೆ ಸಿಕ್ಕಿದರೆ, ಅವರ ನಂಬಿಕೆಯಿಂದ ಜನ ಚಿತ್ರಮಂದಿರಕ್ಕೆ ಬರ್ತಾರೆ ಅನ್ನೋ ವಿಶ್ವಾಸ ಇದೆ. ನಾವು ಆಲ್ರೆಡಿ ಒಂದು ಶೋ ಮಾಡಿದ್ದೇವೆ. ನೋಡಿದ ಜನರು ಮೊದಲ ಇಂಟರ್ವಲ್ ವರ್ಗು ತುಂಬಾ ನಕ್ಕಿದ್ದಾರೆ. ಅದೇ ರೀತಿ ಸೆಕೆಂಡ್ ಆಫ್ ಕೂಡ ಎಮೋಷನ್ ಇದೆ. ನಂತರ ಒಂದಷ್ಟು ಚೇಂಜಸ್ ಗೊತ್ತಾಗಿ ಅದನ್ನ ಸಿದ್ಧಪಡಿಸಿ ಪೂರ್ತಿ ಪ್ರಿಪೇರ್ ಆಗಿ ಬಂದಿದ್ದೇವೆ. ಆಮೇಲೆ ಈ ಚಿತ್ರದ ಕೆಲವು ಸೀನ್ಸ್ ನೈಜವಾಗಿ ಬರುವುದಕ್ಕಾಗಿ ಕುಡಿದು ಆಕ್ಟ್ ಕೂಡ ಮಾಡಿದ್ದೇವೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಚಿತ್ರ ಇದಾಗಿದೆ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ಎಂದರು.
ಮತ್ತೊಬ್ಬ ನಟ ಸುಧಾಕರ್ ಗೌಡ ಮಾತನಾಡುತ್ತಾ, ಈ ಸಿನಿಮಾ ಮಾಡಲು ಬಹಳಷ್ಟು ವರ್ಷಗಳ ಶ್ರಮ ನಮ್ಮದು ಅಡಗಿದೆ. ನಾವು ಜೀರೋ ಇಂದ ಈ ಮಟ್ಟಕ್ಕೆ ಬಂದಿದ್ದೇವೆ. ಈ ಹಿಂದೆ ಒಂದು ವಿಚಾರಕ್ಕಾಗಿ ನನ್ನನ್ನ ಒಬ್ಬ ಸ್ಟಾರ್ ನಟನ ತಂಡ ಟಾರ್ಗೆಟ್ ಮಾಡಿದ್ದು, ಅದಕ್ಕೆ ನಾನು ಕ್ಷಮೆಯು ಕೇಳಿದೆ. ಮತ್ತೆ ಮತ್ತೆ ಅದೇ ವಿಚಾರ ಚರ್ಚೆಗೆ ಬರುತ್ತಿದೆ. ನಾವು ಚಿತ್ರರಂಗದಲ್ಲಿ ಬೆಳೆಯಬೇಕೆಂದು ಬಂದಿರುವಂತಹ ಯುವಕರು, ದಯವಿಟ್ಟು ನಮ್ಮನ್ನ ಹರಸಿ ಬೆಳೆಸಿ ನಮ್ಮ ಚಿತ್ರ ಬಹಳ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಪಾತ್ರಗಳು ಹೇಗೆ ಇದೆ ಎಂಬುವುದನ್ನ ನೀವು ತೆರೆಯ ಮೇಲೆ ನೋಡಿ ಎಂದು ಕೇಳಿಕೊಂಡರು.
ನಟಿ ಪಾಯಲ್ ಚಂಗಪ್ಪ ಮಾತನಾಡುತ್ತಾ, ಇದು ನನ್ನ ಮೊದಲ ಚಿತ್ರ. ನಾನು ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಶಾರ್ಟ್ ಫಿಲಂ ನಲ್ಲೂ ಅವಕಾಶ ಕೊಟ್ಟಿದ್ದರು. ಈಗ ಸಿನಿಮಾದಲ್ಲೂ ಉರಿ ಎಂಬ ಪಾತ್ರವನ್ನ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಲವ್ ಸ್ಟೋರಿ, ಕಾಲೇಜು ಕಥೆ, ಫ್ಯಾಮಿಲಿ ಕಂಟೆಂಟ್ ಎಲ್ಲವೂ ಒಳಗೊಂಡಿದೆ. ನಮ್ಮ ಸಿನಿಮಾ ಇದೆ 30ರಂದು ಚಿತ್ರಮಂದಿರಕ್ಕೆ ಬರುತ್ತಿದೆ. ಬಂದು ಎಲ್ಲರೂ ನೋಡಿ ಎಂದು ಕೇಳಿಕೊಂಡರು.
ತಾಯಿ ಪಾತ್ರ ಮಾಡಿರುವ ಮಧುಮತಿ ಮಾತನಾಡುತ್ತಾ, ಶಾರ್ಟ್ ಮೂವಿಯಲ್ಲಿ ನಗ್ಸೋ ಪಾತ್ರ ಕೊಟ್ರು, ಈ ಸಿನಿಮಾದಲ್ಲಿ ತುಂಬಾ ಎಮೋಷನಲ್ ಪಾತ್ರವನ್ನು ಕೊಟ್ಟಿದ್ದಾರೆ. ನಮ್ಮ ಕಥೆ ಸ್ವಲ್ಪ ವಿಭಿನ್ನವಾಗಿದೆ. ಎಲ್ಲರಿಗೂ ಇಷ್ಟ ಆಗುತ್ತೆ ಚಿತ್ರ ನೋಡಿ ಎಂದರು. ಮತ್ತೊಬ್ಬ ನಟ ಕಾರ್ತಿಕ್ ರೂವಾರಿ ಮಾತನಾಡುತ್ತಾ ನಮ್ಮ ರೆಗ್ಯುಲರ್ ಕಾಮಿಡಿ ಶಾರ್ಟ್ ಮೂವಿ ಗಿಂತ ಬಹಳ ವಿಭಿನ್ನವಾದ ಚಿತ್ರ ಇದು, ಎಲ್ಲರದು ಜೋಡಿ ಕ್ಯಾರೆಕ್ಟರ್ ಇದ್ರೆ. ನನ್ನದು ಸಿಂಗಲ್ ಕ್ಯಾರೆಕ್ಟರ್, ಕಂಪ್ಲೀಟ್ ಮನೋರಂಜನೆ ಸಿಗುತ್ತೆ. ಹಾಗೂ ಮತ್ತೊಬ್ಬ ನಟ ಕಾರ್ತಿಕ್ ಕೂಡ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ಶ್ರೀ ಭವ್ಯ , ಪಲ್ಲವಿ ಪರ್ವ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ.
ಯುವ ಪ್ರತಿಭೆಗಳ ಬೆಂಬಲಕ್ಕೆ ನಿಂತು ನಿರ್ಮಾಣ ಮಾಡಿದ್ದಾರೆ ಲೋಕೇಶ್ ನಾಗಪ್ಪ. ಈ ಚಿತ್ರಕ್ಕೆ ಸುಮಂತ್ ಆಚಾರ್ಯ ಛಾಯಾಗ್ರಹಣ, ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಒಟ್ಟಾರೆ ಔಟ್ ಆಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು , ಇದೆ 30ರಂದು ರಾಜ್ಯಾದ್ಯಂತ ತೆರೆಯ ಮೇಲೆ ಬರಲಿದೆ.


