ನವದೆಹಲಿ: ಅಕ್ಟೋಬರ್ 27ರಂದು ದುಬೈನಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನದ (Dubai-Delhi Air India flight) ಸೀಟಿನ ಪಾಕೆಟ್‌ನಲ್ಲಿ ಒಂದು ಮದ್ದುಗುಂಡಿನ ಕಾರ್ಟ್ರಿಡ್ಜ್ (Ammunition cartridge) ಪತ್ತೆಯಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಭದ್ರತಾ ಪ್ರೋಟೋಕಾಲ್‌ಗಳ ಅನುಸಾರ ತಕ್ಷಣವೇ ಏರ್‌ಪೋರ್ಟ್ ಪೊಲೀಸರಿಗೆ ವಿಮಾನದ ಸಿಬ್ಬಂದಿ ದೂರು ನೀಡಿದ್ದಾರೆ. ಕಾರ್ಟ್ರಿಡ್ಜ್ ಎನ್ನುವುದು ಬಂದೂಕಿಗೆ ಬಳಸುವ ಮದ್ದುಗುಂಡಿನ ಸಾಮಗ್ರಿಯಾಗಿದೆ. ವಿಮಾನದಲ್ಲಿ ಅಂತಹ ವಸ್ತುಗಳನ್ನು ಕೊಂಡೊಯ್ಯುವುದಕ್ಕೆ ನಿಷೇಧವಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇತ್ತೀಚೆಗೆ ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆಗಳು ಹೆಚ್ಚಾಗಿದೆ. ಇದರ ನಡುವೆ ಈ ಘಟನೆ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಸೋಮವಾರ ಮುಂಜಾನೆ ಏರ್ ಇಂಡಿಯಾ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ಪರಿಶೀಲನೆ ವೇಲೆ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಸ್ಫೋಟಕಗಳು ಪತ್ತೆಯಾಗಿರಲಿಲ್ಲ.
ಇತ್ತೀಚೆಗೆ 400ಕ್ಕೂ ಹೆಚ್ಚು ವಿಮಾನಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಸಂದೇಶಗಳು ಬಂದಿದ್ದವು. ಇದಾದ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯವು ಬೆದರಿಕೆಗಳ ವಿರುದ್ಧ ಬಲವಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಈ ಕ್ರಮದಲ್ಲಿ ಆಪಾಧಿತನಿಗೆ ನೋ-ಫ್ಲೈ ಸಹ ಸೇರಿರಲಿದೆ ಎಂದು ಸಚಿವಾಲಯ ತಿಳಿಸಿತ್ತು.
ಇನ್ನೂ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿರುವ ಆರೋಪದ ಮೇಲೆ ಶ್ರೀರಾಮ್ ಉಯಿಕೆ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ವಿಚಾರಣೆ ನಡೆಯುತ್ತಿದೆ.