ನಿಗದಿತ ಸಮಯದೊಳಗೆ, ಕಡಿಮೆ ಬಜೆಟ್‌ನಲ್ಲಿ ಉತ್ತಮ ಚಿತ್ರಗಳನ್ನು ನೀಡುತ್ತಾರೆ ಎಂಬ ಖ್ಯಾತಿಗೆ ಒಳಗಾಗಿರುವ ಹಿರಿಯ ನಟ, ನಿರ್ದೇಶಕ ಎಂ.ಡಿ.ಕೌಶಿಕ್ (M.D. Kaushik) ಈ ಬಾರಿ ಕಾದಂಬರಿ ಆಧಾರಿತ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಸಿನಿಮಾಗೆ ಅವರು ’ಅಮ್ಮನ ಲಾಲಿ’ (Ammana Laali) ಎಂದು ಹೆಸರಿಟ್ಟಿದ್ದಾರೆ. ಸ್ವತಃ ತಾವು ನಟರಾಗಿದ್ದರೂ ಸಿನಿಮಾಕ್ಕೆ ಬಣ್ಣ ಹಚ್ಚದೆ ತೆರೆ ಹಿಂದೆ ಅಂದರೆ ನಿರ್ದೇಶನ ಜತೆಗೆ ಎಮರಾಲ್ಡ್ ಕ್ರಿಯೇಶನ್ಸ್ ಅಡಿಯಲ್ಲಿ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ.
ಗೀತಾ.ಡಿ.ಎನ್. ಬರೆದಿರುವ ಕಥೆಯು, ಇವತ್ತಿನ ಕಾಲಘಟ್ಟದಲ್ಲಿ ಕೆಲವೊಂದು ಮನೆಯಲ್ಲಿ ನಡೆಯುವ ಘಟನಾವಳಿಗಳು, ತಾಯಿ ಮಗಳ ನಡುವಿನ ಆರೋಗ್ಯಕರ ವಾಗ್ವಾದಗಳು, ಸಮಸ್ಯೆಗಳು, ತನ್ನದೆ ಆದ ರೀತಿಯಲ್ಲಿ ಅಂತ್ಯ ಕಾಣುತ್ತದೆ. ಅವುಗಳು ಏನು ಎಂಬುದನ್ನು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ.
ಅಮ್ಮನಾಗಿ ಹಿರಿಯ ನಟಿ ಭವ್ಯ (Bhavya), ಪತಿಯಾಗಿ ಯತಿರಾಜ್. ಇವರೊಂದಿಗೆ ಪದ್ಮ, ರೂಪಾ, ಶರತ್, ನಂದಿನಿ, ಗೀತಾ, ಸೌಮ್ಯ ಮುಂತಾದವರು ನಟಿಸುತ್ತಿದ್ದಾರೆ. ಒಂದು ಭಾಗದ ಸನ್ನಿವೇಶವು ಅಮೇರಿಕಾದಲ್ಲಿ ಬರುವುದರಿಂದ, ಅಲ್ಲಿನ ಕಲಾವಿದರುಗಳಾದ ರಮ್ಯಾ-ಗೌರವ್‌ಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.
ಸದ್ಯ ಅಮೇರಿಕಾ ನಿವಾಸಿ, ಆರ್ಥಿಕ ತಜ್ಞರಾಗಿರುವ ಕನ್ನಡಿಗ ರವಿ.ಇ.ದತ್ತಾತ್ರೇಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿಶೇಷ. ಇವರು ಈಗಾಗಲೇ ಸಾಹಿತಿಗಳ ಕವನಗಳು ಹಾಗೂ ಆಲ್ಬಂಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ ಅನುಭವವಿದೆ.
ಡಿವಿಜಿರವರ ಮಂಕುತಿಮ್ಮನ ಕಗ್ಗ, ಲಕ್ಷಿನಾರಾಯಣ ಭಟ್ಟ ಹಾಗೂ ಡಾ.ದೊಡ್ಡರಂಗೇಗೌಡರ ಸಾಹಿತ್ಯವನ್ನು ಸಿನಿಮಾಕ್ಕೆ ಬಳಸಲಾಗಿದೆ. ಎಂ.ಡಿ.ಪಲ್ಲವಿ ಮತ್ತು ಯುಎಸ್‌ಎ ಪ್ರತಿಭೆ ರಾಂಪ್ರಸಾದ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.