ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದೆಹಲಿಯ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ನುಡಿದಿದ್ದ ಭವಿಷ್ಯ ನಿಜವಾಗಿದೆ.
ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಗೃಹ ಸಚಿವರಾಗಿ ಅಮಿತ್ ಶಾ ನೇಮಕವಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
ದಕ್ಷಿಣ ಗೋವಾದ ಮರ್ಮಗೋವಾದಲ್ಲಿ ಏಪ್ರಿಲ್ 14ರಂದು ನಡೆದ ಆಪ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಅವರು, ದೇಶದಲ್ಲಿ ಭಯಾನಕ ಆಟ ನಡೆಯುತ್ತಿದೆ. ನೀವು ಮತದಾನ ಮಾಡುವಾಗ ಈ ವಿಚಾರ ನಿಮಗೆ ತಿಳಿದಿರಲಿ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಒಂದು ವೇಳೆ ಅಮಿತ್ ಶಾ ಅವರು ಗೃಹ ಸಚಿವರಾದರೆ ದೇಶದಲ್ಲಿ ಏನೆಲ್ಲ ಆಗಬಹುದು ಎಂದು ನೀವೇ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದರು.
ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬುತ್ತೇವೆ. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಜೈನ್ ಧರ್ಮದವರು ಭಾರತದ ಒಳಗೆ ನುಸುಳಿ ಬಂದವರು ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಭಾರೀ ಅಪಾಯಕಾರಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಗೋವಾದಲ್ಲಿ 15 ಲಕ್ಷ ಜನರು ಮತ್ತು ಸುಮಾರು ಶೇ.40 ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಮಿತ್ ಶಾ ಅವರು ಗೋವಾದಲ್ಲಿ ಹೇಗೆ ರಾಷ್ಟ್ರೀಯ ಪೌರತ್ವ ನೋಂದಣಿ ಅಳವಡಿಸಿಕೊಳ್ಳುತ್ತಾರೆ? ಆರು ಲಕ್ಷ ಜನರು ಏನು ಮಾಡಬೇಕು? ನೋಂದಣಿ ಪ್ರಕ್ರಿಯೆಯಿಂದ ಅಮಿತ್ ಶಾ ಅವರು ಗಲಭೆ ಸೃಷ್ಟಿಸುತ್ತಾರಾ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದರು.
ದೆಹಲಿಯಲ್ಲಿ ಗುಜರಾತ್ ಮಾಡೆಲ್ ರಿಪೀಟ್ ಆಗಿದ್ದು, ನಂಬರ್ 1 ಸ್ಥಾನದಲ್ಲಿ ಮೋದಿಯವರು ಇದ್ದರೆ, ನಂಬರ್ 2 ಸ್ಥಾನದಲ್ಲಿ ಅಮಿತ್ ಶಾ ಇದ್ದಾರೆ. ಈ ಮೂಲಕ 2002ರ ಗುಜರಾತ್ ಸೀನ್ 2019ಕ್ಕೆ ದೆಹಲಿಯಲ್ಲಿ ರಿಪೀಟ್ ಆಗಿದ್ದು ರಾಜನಾಥ್ ಸಿಂಗ್ ಅವರು 3ನೇ ಸ್ಥಾನ ಪಡೆದಿದ್ದಾರೆ.
ಅಮಿತ್ ಶಾ ಅವರಿಗೆ ಗೃಹ ಖಾತೆಯನ್ನು ಮೋದಿ ನೀಡಿದ್ದಾರೆ. ಈ ಹಿಂದೆ ಮೋದಿಯವರು ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹಸಚಿವರಾಗಿದ್ದರು. ಕರ್ನಾಟಕದಿಂದ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಬಂಪರ್ ಆಫರ್ ಸಿಕ್ಕಿದ್ದು, ಅರುಣ್ ಜೇಟ್ಲಿ ನಿರ್ವಹಿಸುತ್ತಿದ್ದ ಹಣಕಾಸು ಖಾತೆ ದೊರಕಿದೆ. ಸೀತಾರಾಮನ್ ಅವರು ನಿರ್ವಹಿಸುತ್ತಿದ್ದ ರಕ್ಷಣಾ ಖಾತೆ ಈ ಬಾರಿ ರಾಜನಾಥ್ ಸಿಂಗ್ ಪಾಲಾಗಿದೆ.