ಸಿಎಎ ವಿರೋಧಿಸುವವರು ದಲಿತರ ವಿರೋಧಿಗಳು: ಅಮಿತ್ ಶಾ

Public TV
2 Min Read
Amit Shah Hubballi

– ಬಿಜೆಪಿ ವೋಟ್ ಬ್ಯಾಂಕ್ ನೀತಿಯ ಹಿಂದೆ ಬಿದ್ದಿಲ್ಲ

ಹುಬ್ಬಳ್ಳಿ: ಬಿಜೆಪಿ ವೋಟ್ ಬ್ಯಾಂಕ್ ನೀತಿಯ ಹಿಂದೆ ಬಿದ್ದಿಲ್ಲ. ಇಂತಹ ನೀತಿಯ ಹಿಂದೆ ಬಿದ್ದಿರುವ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಜೆಡಿಎಸ್ ಸೇರಿದಂತೆ ಅನೇಕ ವಿಕ್ಷಗಳು ಕೇಂದ್ರ ಸರ್ಕಾರ ಮಹತ್ವದ ಕಾರ್ಯಗಳನ್ನು ವಿರೋಧಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವನ್ನು ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿರುವ ಮುಸ್ಲಿಂ, ಕ್ರೈಸ್ತರನ್ನು ಸೇರಿದಂತೆ ಎಲ್ಲರನ್ನೂ ನಾವು ಸಮನಾಗಿ ಕಾಣುತ್ತೇವೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ ಆ ದೇಶಗಳಲ್ಲಿ ತಾಯಿ-ತಂದೆಯ ಮುಂದೆಯೇ ಮಗಳ ಅತ್ಯಾಚಾರ ಪ್ರಕರಣಗಳು ನಡೆದಿವೆ. ಹೀಗಾಗಿ ಅನೇಕ ಹಿಂದೂಗಳು ತಮ್ಮ ಮಕ್ಕಳನ್ನು ರಕ್ಷಿಸಲು ಭಾರತಕ್ಕೆ ಬಂದಿದ್ದಾರೆ. ಅವರ ರಕ್ಷಣೆ ನಮ್ಮ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆ ಎಂದು ಹೇಳಿದರು.

Amit Shah Hubballi 1

ನೆರೆಯ ದೇಶಗಳಿಂದ ಬಂದು ಭಾರತದಲ್ಲಿ ನೆಲೆ ಕಂಡ ಸಂತ್ರಸ್ತರಿಗೆ ಆಶ್ರಯ ನೀಡಬೇಕು ಎಂದು ಮಹಾತ್ಮ ಗಾಂಧೀಜಿ ಅವರು 1946ರಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಸೇರಿದಂತೆ ಅನೇಕ ನಾಯಕರ ಆಶಯ ಇದೇ ಆಗಿತ್ತು. ಅದನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈಡೇರಿಸಿದೆ ಎಂದರು.

ವೋಟ್ ಬ್ಯಾಕ್ ನೀತಿಯನ್ನು ಬಿಜೆಪಿ ಅನುಸರಿಸುತ್ತಿಲ್ಲ. ಸಿಎಎ ವಿಚಾರದಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಜೆಡಿಎಸ್ ಸೇರಿದಂತೆ ಅನೇಕ ಪಕ್ಷಗಳು ಮಹತ್ವ ಯೋಜನೆ, ನಿರ್ಧಾರಗಳಲ್ಲಿ ರಾಜಕೀಯ ಮಾಡುತ್ತಿವೆ. ಸಿಎಎ ವಿರೋಧಿಸುವವರು ದಲಿತರ ವಿರೋಧಿಗಳು. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಶೋಷಣೆಗೆ ಒಳಗಾಗಿ ಭಾರತಕ್ಕೆ ಬಂದವರ ಸ್ಥಿತಿ ಕಣ್ಣೀರು ತರಿಸುತ್ತದೆ. ಅವರ ಪರಿಸ್ಥಿತಿಗೆ ಮರುಗಿ ನರೇಂದ್ರ ಮೋದಿ ಅವರು ಉತ್ತಮ ಜೀವನ ಕಟ್ಟಿಕೊಡಲು ಸಿಎಎ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೋ ಬೇಡವೋ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು. ಆಗ ಜನರು ನಿರ್ಮಾಣ ಮಾಡಬೇಕು ಎಂದು ಉತ್ತರಿಸಿದರು. ಬಳಿಕ ಭಾಷಣ ಮುಂದುವರಿಸಿದ ಅಮಿತ್ ಶಾ ಅವರು, ಆದರೆ ನೋಡಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದು ಅವರ ಮೋಟ್ ಬ್ಯಾಂಕ್ ತಂತ್ರ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸಿ ಉಗ್ರರು ಹಾಗೂ ಪಾಕಿಸ್ತಾನಕ್ಕೆ ಉತ್ತರ ನೀಡಿದರು. ಆದರೆ ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮೌನಿಯಾಗಿದ್ದರು. ರಾಹುಲ್ ಬಾಬಾ ಅವರು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಸಿಎಎ ಸೇರಿದಂತೆ ಅನೇಕ ವಿಚಾರಗಳಲ್ಲಿ ರಾಜಕೀಯ ಮಾಡಿದರು ಎಂದು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

ನಿಮ್ಮ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವುದಾದರೆ 88662 88862 ಮೊಬೈಲ್ ನಂಬರಿಗೆ ಮಿಸ್ ಕಾಲ್ ಕೊಡಿ ಎಂದು ಮನವಿ ಮಾಡಿಕೊಂಡರು. ಬಳಿಕ, ನೀವು ಸಿಎಎ ಹಾಗೂ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವುದಾದರೆ ಎರಡೂ ಕೈಗಳನ್ನು ಮೇಲೆತ್ತಿ ಎಂದು ಕೇಳಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಎಲ್ಲರೂ ಎರಡು ಕೈಗಳನ್ನು ಎತ್ತಿ ಬೆಂಬಲ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *