ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಮೈಸೂರು ಅರಮನೆಗೆ ಭೇಟಿ ನೀಡಿ ರಾಜ ಮನೆತನದವರ ಜೊತೆ ಮಾತುಕತೆ ನಡೆಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲೇ ಅಮಿತ್ ಶಾ ಅವರ ಮೈಸೂರು ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಇಂದು ಮೈಸೂರಿನ ಖಾಸಗಿ ಅರಮನೆಗೆ ಭೇಟಿ ನೀಡಿದ ಅಮಿತ್ ಶಾ ರಾಜಮಾತೆ ಪ್ರಮೋದಾ ದೇವಿ ಹಾಗೂ ಯದುವೀರ್ ಒಡೆಯರ್ ಅವರ ಚರ್ಚೆ ನಡೆಸಿದರು. ಬಳಿಕ ಮೈಸೂರು ಅರಮನೆಯ ಗಣಪತಿ ದೇವಸ್ಥಾನ ಮುಂಭಾಗ ಅಮಿತ್ ಶಾ ಹಾಗೂ ಪ್ರಮೋದಾ ದೇವಿ ಒಡೆಯರ್ ಅವರು ಗೌಪ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯದುವೀರ್ ಒಡೆಯರ್ ಅವರನ್ನು ಬಿಟ್ಟು ಇಬ್ಬರೇ ಮಾತುಕತೆ ನಡೆಸಿದರು.
Advertisement
Advertisement
ಅಮಿತ್ ಶಾ ಅವರು ತಮ್ಮ ಮಾತುಕತೆ ವೇಳೆ ಒಡೆಯರ್ ಅವರಿಗೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಬೇಕು. ಇದಕ್ಕಾಗಿ ಬಿಜೆಪಿಗೆ ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ರಾಜಕೀಯ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದರೆ ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ಟಿಕೆಟ್ ನೀಡಲಾಗುವುದು ಎಂದು ಖಚಿತ ಭರವಸೆ ನೀಡಿದರು ಎಂಬುದಾಗಿ ಮೂಲಗಳು ತಿಳಿಸಿವೆ.
Advertisement
Advertisement
ಅಮಿತ್ ಶಾ ಅವರ ರಾಜಕೀಯ ಪ್ರವೇಶದ ಮನವಿಯನ್ನು ಪ್ರಮೋದಾ ದೇವಿ ಅವರು ನಯವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ಒಡೆಯರ್ ಅವರು ಸಮಾನ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜಕೀಯ ಪ್ರವೇಶದ ಕುರಿತು ಆಸಕ್ತಿ ಇದೆ. ಆದರೆ ಇದು ಸೂಕ್ತ ಸಮಯವಲ್ಲ ಎಂದು ಅಮಿತ್ ಶಾ ಅವರ ಮನವಿಯನ್ನು ನಗುತ್ತಲೇ ತಿರಸ್ಕರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಯದುವೀರ್ ಒಡೆಯರ್
ಭೇಟಿ ವೇಳೆ ಯದುವೀರ್ ಪುತ್ರ ಆದ್ಯವೀರ್ ನನ್ನು ಶಾ ಮುದ್ದಾಡಿದರು. ರಾಜಮನೆತನದ ಭೇಟಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.