ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ- ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

Public TV
2 Min Read
AMITSHAH CONGRESS

ಬೆಂಗಳೂರು: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿ ಸುಮಾರು 8 ಕೋಟಿ ಸೀಜ್ ಮಾಡಿದೆ. ಲೋಕಾಯುಕ್ತ (Lokayukta) ದಾಳಿ ಮಾಡುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುದಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಬಿಜೆಪಿ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ, ಕರ್ನಾಟಕ `ಕಮಿಷನ್ ರಾಜ್ಯ’ವಾಗಿದೆ- HDK

ಟ್ವೀಟ್‍ನಲ್ಲೇನಿದೆ..?: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ!. ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು?. ಇಂದು ಅಮಿತ್ ಶಾ (Amitshah) ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ?. ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು ಬಿಜೆಪಿ?. ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayCM ಗೆ ತಲುಪಿಸುವುದಕ್ಕಾ?. ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೋದಿ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?. ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ? ಎಂದಿದೆ. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ದಾಖಲೆಯಲ್ಲವೇ?- ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಟಿ

“ನಾ ಖಾವುಂಗಾ, ನಾ ಖಾನೆದುಂಗಾ” ಎನ್ನುವ ನರೇಂದ್ರ ಮೋದಿ (Narendra Modi) ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? “ಶಬಾಷ್” ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ? ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‍ಗಳನ್ನೇ ಕಟ್ಟಿಸಿರುವಂತಿದೆ ಎಂದು ಕಾಂಗ್ರೆಸ್ ಹೇಳಿದೆ.

ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ. ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ ಅಮಿತ್ ಶಾ ಅವರೇ? ಭ್ರಷ್ಟಾಚಾರವೇ ಬಿಜೆಪಿಯ ಭರವಸೆ! ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಬಿಜೆಪಿ ನೀಡುವ ಭರವಸೆ 40% ಕಮಿಷನ್, ಅಕ್ರಮ, ಹಗರಣ, ಭ್ರಷ್ಟಾಚಾರ ಮಾತ್ರ ಎಂದು ತಿಳಿಸಿದೆ. ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ- 8.12 ಕೋಟಿ ಹಣ ಸೀಜ್

ಕರ್ನಾಟಕವನ್ನು ಲೂಟಿ ಹೊಡೆದು ಕೇಂದ್ರದ ನಾಯಕರಿಗೆ ಕಪ್ಪ ಕಾಣಿಕೆ ನೀಡುವುದಷ್ಟೇ ಇವರ ಭರವಸೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ ಈ ಪ್ರಕರಣವನ್ನು ಲೋಕಾಯುಕ್ತ ನೋಡಿಕೊಳ್ಳುತ್ತದೆ ಎಂದಿರುವ ಬೊಮ್ಮಾಯಿ (Basavaraj Bommai) ಅವರೇ, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ನಿಮ್ಮ ಕೊಡುಗೆ, ಬದ್ಧತೆ ಏನು? ಈ ಹಿಂದೆಯೇ ಕಮಿಷನ್ ವಿಚಾರವನ್ನು ತನಿಖೆಗೆ ವಹಿಸದೆ ಬಂಡ ಸಮರ್ಥನೆಗೆ ಇಳಿದಿದ್ದೇಕೆ?. ಆರೋಪ ಮಾಡಿದವರ ಮೇಲೆಯೇ ಮುಗಿಬಿದ್ದಿದೇಕೆ ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *