ಬೆಂಗಳೂರು: ಕೊನೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಸಚಿವರಾಗಲು ಕಾಯುತ್ತಿದ್ದ ಆಕಾಂಕ್ಷಿ ಶಾಸಕರಲ್ಲಿ ಹುಮ್ಮಸ್ಸು, ನಿರೀಕ್ಷೆ, ಆತಂಕಗಳೆಲ್ಲ ಒಟ್ಟಿಗೆ ಕಾಣಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿ ಪೌರತ್ವ ಕಾಯ್ದೆ(ಸಿಎಎ) ಕುರಿತು ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಮಧ್ಯಾಹ್ನ 12.15ಕ್ಕೆ ಯಲಹಂಕ ವಾಯುನೆಲೆಗೆ ಅಮಿತ್ ಶಾ ಬಂದಿಳಿಯಲಿದ್ದಾರೆ. ಅಮಿತ್ ಶಾ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲೇ ಇದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ವಿವೇಕಾದೀಪಿನಿ ಮಹಾಸಮರ್ಪಣ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.
ಬಳಿಕ ಮಧ್ಯಾಹ್ನ 3.15ಕ್ಕೆ ಯಲಹಂಕ ವಾಯುನೆಲೆಯಿಂದ ಹುಬ್ಬಳ್ಳಿಗೆ ಅಮಿತ್ ಶಾ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಸಂಜೆ 4.30ಕ್ಕೆ ಹುಬ್ಬಳ್ಳಿಗೆ ತಲುಪಲಿರುವ ಅಮಿತ್ ಶಾ, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ನೆಹರೂ ಸ್ಟೇಡಿಯಂಗೆ ಪ್ರಯಾಣಿಸಲಿದ್ದಾರೆ. ಸಂಜೆ 4.55 ರಿಂದ 5.30 ರವರೆಗೆ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಸಿಎಎ ಕುರಿತ ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರು, ಡಿಸಿಎಂ, ಸಚಿವರುಗಳು ಮತ್ತು ಪಕ್ಷದ ಪ್ರಮುಖರು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
Advertisement
Advertisement
ಅಮಿತ್ ಶಾ, ಸಿಎಂ ಮಾತುಕತೆ:
ಹುಬ್ಬಳ್ಳಿಯ ಕಾರ್ಯಕ್ರಮ ಮುಗಿದ ಬಳಿಕ ಅಮಿತ್ ಶಾ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ನಲ್ಲಿ ಅಮಿತ್ ಶಾ ವಾಸ್ತವ್ಯ ಮಾಡಲಿದ್ದಾರೆ. ಡೆನಿಸನ್ ಹೋಟೆಲ್ ನಲ್ಲೇ ನಾಳೆ ಮುಸ್ಸಂಜೆ ಬಳಿಕ ಅಮಿತ್ ಶಾರನ್ನು ಸಿಎಂ ಯಡಿಯೂರಪ್ಪ ಭೇಟಿಯಾಗಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿದ್ದಾರೆ. ಅಮಿತ್ ಶಾ ಭೇಟಿಗೆ ಯಡಿಯೂರಪ್ಪ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
Advertisement
ಸಂಭಾವ್ಯ ಸಚಿವರ ಪಟ್ಟಿಯನ್ನು ಈಗಾಗಲೇ ಸಿದ್ಧ ಮಾಡಿಕೊಂಡಿರುವ ಸಿಎಂ, ಅದನ್ನು ಅಮಿತ್ ಶಾ ಮುಂದಡಲಿದ್ದಾರೆ. ಜೊತೆಗೆ ಹೊಸ ಶಾಸಕರ ಪೈಕಿ ಎಷ್ಟು ಜನಕ್ಕೆ ಮತ್ತು ಪಕ್ಷದ ಶಾಸಕರ ಪೈಕಿ ಎಷ್ಟು ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು, ಯಾರಿಂದ ಯಾವ ಖಾತೆಗಳನ್ನು ವಾಪಸ್ ಪಡೆಯಬೇಕು ಅನ್ನೋದರ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ. ಇದರ ಜೊತೆಗೆ ಡಿಸಿಎಂ ಹುದ್ದೆಗಳನ್ನು ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.
Advertisement
ಅಮಿತ್ ಶಾ ಭೇಟಿ ಬಳಿಕವೇ ಸಂಪುಟ ವಿಸ್ತರಣೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಆದರೆ ಯಡಿಯೂರಪ್ಪ ಮಾತ್ರ ಈ ತಿಂಗಳಲ್ಲೇ ಸಂಪುಟ ವಿಸ್ತರಣೆಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಇನ್ನು ಜನವರಿ 19ರ ಬೆಳಗ್ಗೆ 9.15ಕ್ಕೆ ಹುಬ್ಬಳ್ಳಿಯಿಂದಲೇ ಅಮಿತ್ ಶಾ ದೆಹಲಿಗೆ ವಾಪಸ್ ಮರಳಲಿದ್ದಾರೆ. ಅಮಿತ್ ಶಾ ಜೊತೆಗೆ ಸಿಎಂ ಯಡಿಯೂರಪ್ಪ ಭೇಟಿ ಮುಗಿಯುವವರೆಗೂ ಸಚಿವ ಸ್ಥಾನದ ಆಕಾಂಕ್ಷಿಗಳ ಎದೆ ಬಡಿತ ಜೋರಾಗಿಯೇ ಇರಲಿದೆ.