ಮಂಡ್ಯ: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ (JDS-BJP) ಹಾಗೂ ಕಾಂಗ್ರೆಸ್ (Congress) ನಡುವೆ ತೀವ್ರ ಪೈಪೋಟಿ ಎದುರಾಗಿ ಕೊನೆಗೆ ಸಿನಿಮೀಯ ಮಾದರಿಯಲ್ಲಿ ಜೆಡಿಎಸ್-ಬಿಜೆಪಿ ಮಂಡ್ಯ (Mandya) ನಗರಸಭೆ ಗದ್ದುಗೆ ಏರಿದೆ.
ಹಳ್ಳಿ ಎಲೆಕ್ಷನ್ ಇರಲಿ. ದಿಲ್ಲಿ ಎಲೆಕ್ಷನ್ ಇರಲಿ. ಅದು ರಾಜ್ಯದಲ್ಲಿ ಚರ್ಚೆ ಆಗೋದಂತೂ ಗ್ಯಾರಂಟಿ. ಅಂತಹದ್ದೆ ರಾಜಕೀಯ ಸೌಂಡ್‌ನ್ನು ಇಂದು ಮಂಡ್ಯದ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮಾಡಿದೆ. ನಗರಸಭೆಯ ಗದ್ದುಗೆಯನ್ನು ಏರಲು ಸಚಿವ ಚಲುವನಾರಾಯಣಸ್ವಾಮಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಇದರ ನೇತೃತ್ವವನ್ನು ಕಾಂಗ್ರೆಸ್‌ನಲ್ಲಿ ಶಾಸಕ ರವಿಕುಮಾರ್ ಗೌಡಗೆ ನೀಡಿದ್ದರು. ಈ ಪ್ರತಿಷ್ಠೆಯ ಸವಾಲನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಹ ಸ್ವೀಕಾರ ಮಾಡಿ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದರು.ಇದನ್ನೂ ಓದಿ: ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ: ಉಮೇಶ್ ಬಣಕಾರ್
ಮಂಡ್ಯ ನಗರಸಭೆಯಲ್ಲಿ 35 ಸದಸ್ಯರ ಬಲವಿದ್ದು, ಈ ಪೈಕಿ ಕಾಂಗ್ರೆಸ್ 10, ಜೆಡಿಎಸ್ 18, ಬಿಜೆಪಿ 2 ಹಾಗೂ ಪಕ್ಷೇತರ 5 ಸದಸ್ಯರು ಇದ್ದರು. ನಗರಸಭೆ ಗದ್ದುಗೆ ಏರಲು 19 ಮತಗಳು ಅನಿವಾರ್ಯವಾಗಿತ್ತು. ಹೀಗಾಗಿ ಕಾಂಗ್ರೆಸ್ ತಮ್ಮ 10 ಸದಸ್ಯರ ಜೊತೆಗೆ ಪಕ್ಷೇತರ 5 ಮಂದಿಯನ್ನು ಒಟ್ಟುಗೂಡಿಸಿ, ಶಾಸಕರ 1 ಮತದ ಜೊತೆಗೆ ಜೆಡಿಎಸ್ 3 ಸದಸ್ಯರನ್ನು ಆಪರೇಷನ್ ಮಾಡಿ 19 ಮತ ಪಡೆದು ಅಧಿಕಾರ ಹಿಡಿಯಲು ಮುಂದಾಗಿತ್ತು. ಕಾಂಗ್ರೆಸ್, ಜೆಡಿಎಸ್‌ನ 3 ಸದಸ್ಯರನ್ನು ಆಪರೇಷನ್ ಮಾಡಿತು. ಇತ್ತ ಜೆಡಿಎಸ್, ಕಾಂಗ್ರೆಸ್‌ನ ಓರ್ವ ಸದಸ್ಯನನ್ನು ಆಪರೇಷನ್ ಮಾಡಿತು.
ಇಂದು ಕಾಂಗ್ರೆಸ್ ಸದಸ್ಯರು ಹಾಗೂ ಓರ್ವ ಆಪರೇಷನ್ ಮಾಡಿದ ಸದಸ್ಯರನ್ನು ಶಾಸಕ ರವಿಕುಮಾರ್ (Ravikumar Gowda) ನಗರಸಭೆಗೆ ಬಸ್‌ನಲ್ಲಿ ಕರೆತಂದರು. ಬಳಿಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumarswamy) ಸಹ ತಮ್ಮ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಸದಸ್ಯನ್ನು ಬಸ್‌ನಲ್ಲಿ ಕರೆತಂದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೆ ವಾತಾವರಣ ನಿರ್ಮಾಣವಾಯಿತು. ಕುಮಾರಸ್ವಾಮಿ ಅವರು ಇದ್ದರೂ ಸಹ ವಾತಾವರಣ ತಿಳಿಯಾಗಲಿಲ್ಲ. ಬಳಿಕ ನಗರ ಪೊಲೀಸರು ಬಂದು ವಾತಾವರಣವನ್ನು ತಣ್ಣಗೆ ಮಾಡಿದರು.ಇದನ್ನೂ ಓದಿ: ಸರ್ಕಾರಿ ಕ್ರೀಡಾಕೂಟದ ಪ್ರಮಾಣ ಪತ್ರದಲ್ಲಿ ಯೇಸು, ಮೇರಿ ಭಾವಚಿತ್ರ: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ
ಬಳಿಕ ನಗರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಓರ್ವ ಸದಸ್ಯನ ಮತ ಸೇರಿ 19 ಮತಗಳು ಬಿದ್ದವು. ಇನ್ನೂ ಕಾಂಗ್ರೆಸ್‌ಗೆ ಶಾಸಕ ರವಿಕುಮಾರ್, ಜೆಡಿಎಸ್‌ನ ಮೂವರು ಸದಸ್ಯರು ಸೇರಿದಂತೆ 18 ಮತಗಳು ಬಿದ್ದವು. ಈ ಮೂಲಕ ಒಂದು ಮತದಿಂದ ಜೆಡಿಎಸ್‌ನ ನಾಗೇಶ್ ಅಧ್ಯಕ್ಷರಾಗಿ, ಬಿಜೆಪಿಯ ಅರುಣ್‌ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಾಸಕ ರವಿಕುಮಾರ್ ಜೆಡಿಎಸ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಸದಸ್ಯರನ್ನು ಬೆದರಿಸಿ ಅಧಿಕಾರ ಹಿಡಿದಿದೆ ಎಂದು ಆರೋಪ ಮಾಡಿದರು. ಇದಕ್ಕೆ ಕೌಂಟರ್ ಆಗಿ ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮದೇ ಶೈಲಿಯಲ್ಲಿ ಎದುರೇಟು ನೀಡಿದರು.