ಜೈಪುರ್: ರಾಜಸ್ಥಾನದಲ್ಲಿ (Rajasthan) ಹೀಟ್ ಸ್ಟ್ರೋಕ್‍ನಿಂದ (Heatstroke) ಬಳಲುತ್ತಿರುವವರ ಸಂಖ್ಯೆ ಸೋಮವಾರ 2,809 ರಿಂದ 3,622ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ತೀವ್ರವಾದ ಶಾಖದ ಅಲೆಯ (Heatwave) ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಸೋಮವಾರ (ಮೇ 27) ರಾಜ್ಯದ ಫಲೋಡಿಯಲ್ಲಿ 49.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯಕ್ಕಿಂತ 6.3 ಡಿಗ್ರಿ ಹೆಚ್ಚಳವಾಗಿದೆ. ಜೈಪುರದಲ್ಲಿ (Jaipur) ಗರಿಷ್ಠ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಭಾನುವಾರಕ್ಕಿಂತ 0.8 ಡಿಗ್ರಿ ಹೆಚ್ಚಾಗಿದೆ. ಕೋಟಾದಲ್ಲಿ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಸ್ತೆ ದಾಟುವಾಗ ಕಾರು ಡಿಕ್ಕಿ – ಅಮೆರಿಕದಲ್ಲಿ ತೆಲಂಗಾಣ ಮೂಲದ ಯುವತಿ ಸಾವು
ರಾಜ್ಯದ ಬಹುತೇಕ ಎಲ್ಲಾ ನಗರಗಳು 45 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿವೆ. ಅಜ್ಮೀರ್‍ನಲ್ಲಿ ಗರಿಷ್ಠ ತಾಪಮಾನ 46.3 ಡಿಗ್ರಿ ಸೆಲ್ಸಿಯಸ್, ಭಿಲ್ವಾರ್ (47.4), ಭರತ್‍ಪುರ (48.2), ಅಲ್ವಾರ್ (46.2), ಪಿಲಾನಿ (48.5), ಚಿತ್ತೋರ್‍ಗಢ (47), ಬಾರ್ಮರ್ (49.3), ಜೈಸಲ್ಮೇರ್ (48.7), ಜೋಧ್‍ಪುರ (47.4), ಬಿಕಾನೇರ್ (48.2), ಚುರು (48), ಶ್ರೀ ಗಂಗಾನಗರ (48.3), ಮತ್ತು ಧೋಲ್‍ಪುರದಲ್ಲಿ 48.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಅಲ್ಲದೇ ಇಂದು ಸಹ (ಮೇ 28 ರಂದು) ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ತೀವ್ರತರವಾದ ಬಿಸಿಗಾಳಿ ಪರಿಸ್ಥಿತಿಯು ಮುಂದಿನ 2-3 ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮೇ 29ರಿಂದ ತಾಪಮಾನ ಕಡಿಮೆಯಾಗಲು ಆರಂಭವಾಗಲಿದ್ದು, ಜೂನ್ ಮೊದಲ ವಾರದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಸ್ಥಿತಿಯಲ್ಲಿರಲಿದೆ ಎಂದು ಜೈಪುರ್‌ನ ಹವಾಮಾನ ಇಲಾಖೆಯ (Meteorological Department) ನಿರ್ದೇಶಕ ಆರ್.ಎಸ್. ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು