ನೀವೆಂದೂ ಕಂಡು ಕೇಳರಿಯದ ವಿಚಿತ್ರ ಕಥಾಹಂದರದ ಜೊತೆ ನಿಮ್ಮನ್ನೆಲ್ಲಾ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ, ಶ್ರೀನಿ ಹನುಮಂತರಾಜು ಹೊಸ ಸಾಹಸ, ಚಿತ್ರ ಪ್ರೇಮಿಗಳನ್ನು ಬೆರಗುಗೊಳಿಸಲಿದೆ ಎತ್ತಿನ ಭುಜ!
Advertisement
ಕನ್ನಡ ಚಿತ್ರರಂಗದಲ್ಲಿ ಕ್ರೈಮ್ ಸ್ಟೋರಿ ಕುರಿತಾದ ನೂರೆಂಟು ಸಿನಿಮಾಗಳು ಬಂದಿವೆ. ಇದೀಗ ಅನ್‍ಟೋಲ್ಡ್ ಕ್ರೈಮ್ ಸ್ಟೋರಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಅಂಬುಜ (Ambuja) ರೆಡಿಯಾಗಿದ್ದಾಳೆ. ನೈಜ ಘಟನೆಯನ್ನ ಆಧಾರವಾಗಿಟ್ಟುಕೊಂಡು ನಿರ್ದೇಶಕ ಶ್ರೀನಿ ಹನುಮಂತರಾಜು ಅಂಬುಜ ಸಿನಿಮಾವನ್ನ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ನೋಟದಲ್ಲೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ, ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಹುಟ್ಟಿಸಿರುವ ಅಂಬುಜ, ಅಂಬಾರಿ ಮೇಲೆ ಕೂತು ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಡುವ ಸಮಯ ಸನ್ನಿಹಿತವಾಗಿದೆ. ಇದೇ ಹೊತ್ತಿಗೆ ಎತ್ತಿನ ಭುಜದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ನಿರ್ದೇಶಕ ಶ್ರೀನಿ (Srini Hanumantharaju) ಹಲವು ನಿಗೂಢಗಳನ್ನು ಹೊರಹಾಕಿ ಕುತೂಹಲ ಕೆರಳಿಸಿದ್ದಾರೆ.
Advertisement
Advertisement
ಎತ್ತಿನ ಭುಜ ಚಿಕ್ಕಮಂಗಳೂರಿನ ಬಳಿಯಿರುವ ಅತೀ ಎತ್ತರದ ಬೆಟ್ಟ. ಈ ಬೆಟ್ಟದ ಸುತ್ತಮುತ್ತ ಕೆಲವು ಸಿನಿಮಾ ಮಂದಿ ಶೂಟಿಂಗ್ ಮಾಡಿದ್ದಾರೆ. ಆದರೆ, ಬರೋಬ್ಬರಿ ಮೂರು ಕಿಲೋಮೀಟರ್ ಗಳಷ್ಟು ಎತ್ತರವಿರುವ ಎತ್ತಿನ ಭುಜ ಬೆಟ್ಟವನ್ನೇರುವ ಸಾಹಸವನ್ನು ಯಾರೊಬ್ಬರು ಮಾಡಿರಲಿಲ್ಲ. ಇದೇ ಮೊದಲ ಭಾರಿಗೆ ಅಂಬುಜ ಸಿನಿಮಾ ತಂಡ ಎತ್ತಿನ ಭುಜದ ತುತ್ತ ತುದಿಯನ್ನೇರಿ ಹಾಡೊಂದನ್ನು ಚಿತ್ರೀಕರಿಸಿದೆ. ಸ್ಯಾಂಡಲ್‍ವುಡ್‍ನ ಸಪೌಷ್ಠಿಕ ಸುಂದರಿ ಶುಭಪುಂಜಾ ಹಾಗೂ ದೀಪಕ್ ಸುಬ್ರಮಣ್ಯ ಕಾಂಬಿನೇಷನ್‍ನಲ್ಲಿ ಈ ಹಾಡು ಸುಂದರವಾಗಿ ಮೂಡಿಬಂದಿದೆ.
Advertisement
ಹೀಗೆ ಎತ್ತಿನ ಭುಜದ ಬೆಟ್ಟದಲ್ಲಿ ಶೂಟಿಂಗ್ ಮಾಡಿ ಹೊಸದೊಂದು ದಾಖಲೆ ಬರೆದ ಚಿತ್ರತಂಡ, `ಮಗು ತಾಯಿಗೆ ಲಾಲಿ ಹಾಡುವ’ ಹಾಡೊಂದನ್ನು ರಚನೆ ಮಾಡುವುದರ ಮೂಲಕ ಗಂಧದಗುಡಿಯಲ್ಲಿ ಇತಿಹಾಸ ನಿರ್ಮಿಸಿದೆ. ಚಿತ್ರದ ನಿರ್ಮಾಪಕರಾದ ಕಾಶಿನಾಥ್ ಅವ್ರು ಸಾಹಿತ್ಯ ಬರೆದಿರುವ, ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿರುವ ಈ ಹಾಡು, ಈಗಾಗಲೇ ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಕನ್ನಡ ಕಲಾಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ತಾಯಿ ಪಾತ್ರದಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ ಕಾಣಿಸಿಕೊಂಡಿದ್ದು, ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ಮಿಂಚಿದ್ದಾಳೆ. ಇಬ್ಬರು ಲಂಬಾಣಿ ವೇಷಭೂಷಣ ತೊಟ್ಟು ಲಾಲಿ ಹಾಡಿಗೆ ಮೆರಗು ತುಂಬಿದ್ದಾರೆ.
ಅಂಬುಜ ಒಂದು ಮಹಿಳಾ ಪ್ರಧಾನ ಚಿತ್ರ. ಇಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ (Rajini)ಹಾಗೂ ಶುಭಾ ಪುಂಜಾ (Shubha Punja) ಇಬ್ಬರು ಮುಖ್ಯಭೂಮಿಕೆಯಲ್ಲಿದ್ದಾರೆ. ಕ್ರೈಮ್ ರಿಪೋರ್ಟರ್ ಪಾತ್ರದಲ್ಲಿ ಶುಭ ಪುಂಜಾ ಕಾಣಸಿಗ್ತಾರೆ. ಪದ್ಮಜ ರಾವ್, ದೀಪಕ್ ಸುಬ್ರಮಣ್ಯ, ಗೋವಿಂದೇಗೌಡ, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಬೇಬಿ ಆಕಾಂಕ್ಷ, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಹಿಂದೆ ನಿರ್ದೇಶಕ ಶ್ರೀನಿಯವರು ‘ಕೆಲವು ದಿನಗಳ ನಂತರ’ ಹೆಸ್ರಲ್ಲೊಂದು ಸಿನಿಮಾ ಮಾಡಿದ್ದರು. ಹಾರರ್ ಕಥೆ ಮೂಲಕ ಕಣಕ್ಕಿಳಿದಿದ್ದ ಇವ್ರು ಪ್ರೇಕ್ಷಕ ಮಹಾಷಯರನ್ನ ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅಂಬುಜ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಮರ್ಡರ್ ಮಿಸ್ಟ್ರಿ, ಹಾರರ್, ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರುವ ಅಂಬುಜ ಚಿತ್ರವನ್ನ ಪ್ರೇಕ್ಷಕರ ಮಡಿಲಿಗೆ ಹಾಕೋದಕ್ಕೆ ಹೊರಟಿದ್ದಾರೆ. ಈ ಕುರಿತು ಮಾತನಾಡಿದ ಡೈರೆಕ್ಟರ್ ಶ್ರೀನಿಯವರು, ಹಾರರ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಕ್ಯಾಮರಾ ಸಡನ್ನಾಗಿ ಆಫ್ ಆಗ್ತಿತ್ತು, ಸಿನಿಮಾ ಟೀಮ್‍ನ ಸದಸ್ಯರಿಗೆ ಆರೋಗ್ಯ ಹದಗೆಡುತ್ತಿತ್ತು ಅಂತೇಳಿ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣ ನೆಗಟೀವ್ ಎನರ್ಜಿನಾ ಅನ್ನೋದು ಪ್ರಶ್ನೆ.
ಅಂದ್ಹಾಗೇ, ಬೆಂಗಳೂರು, ಚಿಕ್ಕಮಂಗಳೂರು, ಗದಗದಲ್ಲಿ ಅಂಬುಜ ಸಿನಿಮಾ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸುವುದರ ಜೊತೆಗೆ ನಿರ್ಮಾಣದ ಜವಬ್ದಾರಿ ಹೊತ್ತ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ಅವರು ಎಸ್.ಕೆ.ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಬುಜ ಚಿತ್ರವನ್ನ ತೆರೆಗೆ ತರುತ್ತಿದ್ದಾರೆ. ಲೋಕೇಶ್ ಭೈರವ, ಶಿವಪ್ರಕಾಶ್. ಎನ್ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ತ್ಯಾಗರಾಜ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಹೊಸತನ ತೋರಿಸಿದ್ದಾರೆ. ಜುಲೈ 21ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಮಾರ್ಸ್ ಸುರೇಶ್ ವಿತರಣೆ ಜವವ್ದಾರಿ ಹೊತ್ತಿದ್ದಾರೆ. ಎನಿವೇ ನಿರ್ದೇಶಕರ ಡೆಬ್ಯೂ ಚಿತ್ರ ಕೆಲವು ದಿನಗಳ ನಂತರ ಕಮಾಯಿ ಮಾಡಿದಂತೆ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗೆ ಡಬ್ ಆದಂತೆ ಈ ಸಿನಿಮಾವೂ ಪರಭಾಷೆಗೆ ಹೋಗಲಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿ.
Web Stories