ಧಾರವಾಡ: ವರಕವಿ ದ.ರಾ. ಬೇಂದ್ರೆ ಅವರನ್ನು ಯುಗದ ಕವಿ, ಜಗದ ಕವಿ ಎಂದು ಕರೆಯಲಾಗುತ್ತೆ. ಇದೇ ಕಾರಣಕ್ಕೆ ಬೇಂದ್ರೆಯವರ ಕವನಗಳು ದೇಶದ ಪ್ರಧಾನಿಯ ನಾಲಿಗೆಯ ಮೇಲೂ ನಲಿದಾಡಿದೆ. ಆದರೆ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯ ಮೊತ್ತವನ್ನು ಕಡಿತ ಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ಈ ಹಿಂದೆ ಬೇಂದ್ರೆ ಅವರ ಪ್ರಶಸ್ತಿಗೆ 1 ಲಕ್ಷ ರೂ. ಇದ್ದ ಮೊತ್ತವನ್ನು ಏಕಾಏಕಿಯಾಗಿ 10 ಸಾವಿರಕ್ಕೆ ಇಳಿಸಲಾಗಿದೆ. ಸರ್ಕಾರದ ನಡೆ ಸಾಹಿತ್ಯ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಕುವೆಂಪು ಮತ್ತು ಬೇಂದ್ರೆ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಆದರೆ ಈಗಿನ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ವರ್ತನೆ ತೋರುತ್ತಿದ್ದು, ಇದರ ಪರಿಣಾಮ ಧಾರವಾಡದ ಸಾಧನಕೆರೆಯಲ್ಲಿರುವ ದ.ರಾ.ಬೇಂದ್ರೆ ಭವನಕ್ಕೆ ಸುಣ್ಣ ಬಳಿಯೋಕು ಹಣ ಇಲ್ಲದಂತಾಗಿದೆ.
Advertisement
ಇದೇ ಜ.31ಕ್ಕೆ ಬೇಂದ್ರೆಯವರ ಜನ್ಮದಿನ ಇದೆ. ಈ ವೇಳೆಗಾಗಲೇ 31ರಂದು ಬೇಂದ್ರೆಯವರ ಹೆಸರಿನಲ್ಲಿ ನೀಡಲಾಗುವ ‘ಅಂಬಿಕಾತನಯದತ್ತ ಪ್ರಶಸ್ತಿ’ ಪ್ರಕಟಿಸಬೇಕಾಗಿತ್ತು. ಆದರೆ ಪ್ರಶಸ್ತಿಯ ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಡಿಮೆ ಮಾಡಿದ್ದು, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅವರು ಪ್ರಶಸ್ತಿ ಪ್ರಕಟಿಸುವ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ. ಮೇಲಾಗಿ ಈ ಟ್ರಸ್ಟಿಗೆ ನೀಡುತ್ತಿದ್ದ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನವನ್ನು 4 ಲಕ್ಷ ರೂಪಾಯಿಗೆ ಇಳಿಸಿದ್ದಾರೆ.
Advertisement
ಇಷ್ಟು ದಿನ 10 ಲಕ್ ರೂ. ಹಾಗೂ ಪ್ರಶಸ್ತಿ ಕೊಟ್ಟು, ಈಗ 10 ಸಾವಿರ ರೂಪಾಯಿ ಎಂದಾಕ್ಷಣ ನಮಗೆ ಆಘಾತವಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಡಿ.ಎಂ.ಹಿರೇಮಠ ಅವರು ಹೇಳಿದ್ದು, ಬೇಂದ್ರೆಯವರು ವಾಸವಿದ್ದ ಸಾಧನಕೆರೆ ಮನೆಯೇ ಈಗ ಮ್ಯೂಸಿಯಂ ಆಗಿದೆ. ಪಕ್ಕದಲ್ಲಿರೋ ಬೇಂದ್ರೆ ಭವನದಲ್ಲಿ ಸಾಹಿತ್ಯ ಭಂಡಾರ, ಗ್ರಂಥಾಲಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇದೆಲ್ಲ ನಡೆಯೋದಕ್ಕೆ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದು, ಆ ಸಿಬ್ಬಂದಿ ವೇತನ, ಖರ್ಚು ವೆಚ್ಚ ಸೇರಿ ವರ್ಷಕ್ಕೆ ಆರೂವರೆ ಲಕ್ಷ ಆಗುತ್ತೆ. ಆದರೆ ಈಗ ಸರ್ಕಾರ ವರ್ಷಕ್ಕೆ 4 ಲಕ್ಷ ಮಾತ್ರ ನಿಡುತ್ತೇವೆ ಎಂದು ಹೇಳಿದೆ. ಟ್ರಸ್ಟ್‍ಗೆ ಉಳಿದ ಹಣ ಎಲ್ಲಿಂದ ತರೋದು ಎಂದು ಚಿಂತೆಯಾಗಿದೆ.
ಬೇಂದ್ರೆಯವರ ಶ್ರಾವಣ ಕವನ ಹಾಗೂ ಕುರುಡು ಕಾಂಚಾಣ ಕುಣಿಯುತ್ತಲಿತ್ತು ಎಂಬ ಕಾವ್ಯವನ್ನೂ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಈ ಹಿಂದೆ ವಾಚಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೇಂದ್ರೆ ನಿವಾಸಕ್ಕೂ ಭೇಟಿ ನೀಡಿದ್ರು. ಆದರೆ ಈಗ ಅವರದೇ ಪಕ್ಷದ ಸರ್ಕಾರವೇ ಈ ರೀತಿ ಮಾಡುವ ಮೂಲಕ ಬೇಂದ್ರೆಯವರ ವ್ಯಕ್ತಿತ್ವಕ್ಕೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ರಾಜಕುಮಾರ ಮಡಿವಾಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಸಾಹಿತ್ಯ ಪ್ರಶಸ್ತಿಗಳ ಮೊತ್ತ ಹೆಚ್ಚಿಸುವ ಮೂಲಕ ಆಯಾ ಸಾಹಿತಿ ಘನತೆಗೆ ಗೌರವ ದೊರಕಿಸಿಕೊಡುವ ಕಾರ್ಯ ಇಲ್ಲಿಯವರೆಗೆ ನಡೆಯುತ್ತ ಬಂದಿತ್ತು. ಈಗ ಇರುವ ಮೊತ್ತವನ್ನೇ ಗಣನಿಯವಾಗಿ ಇಳಿಸುವ ಮೂಲಕ ಸಾಹಿತ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂಬ ವರ್ತನೆಯನ್ನು ಸರ್ಕಾರ ತೋರುತ್ತಿದೆ. ಇದಕ್ಕೆ ಈಗ ಸರ್ಕಾರ ಏನು ಉತ್ತರ ಕೊಡುತ್ತೆ ಎಂಬುವುದು ಸಾಹಿತಿಗಳ ಪ್ರಶ್ನೆಯಾಗಿದೆ.