ಬೆಂಗಳೂರು: ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಯವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 61ನೇ ಸಿಟಿ ಸಿವಿಲ್ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಆಂಬಿಡೆಂಟ್ ಕಂಪನಿಯ ವಂಚನೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಯ ಹೆಸರು ಕೇಳಿಬಂದಿತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ರೆಡ್ಡಿಗಾಗಿ ವ್ಯಾಪಕ ಶೋಧ ನಡೆಸಿದ್ದರು. ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬರುತ್ತಲೇ, ರೆಡ್ಡಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅಲ್ಲದೇ ನಿರೀಕ್ಷಣಾ ಜಾಮೀನು ಪಡೆದ ಬಳಿಕ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ ಮೂಂದೂಡಿದೆ.
Advertisement
Advertisement
ಕಲಾಪದಲ್ಲಿ ಇಂದು ಏನಾಯ್ತು?
ರೆಡ್ಡಿ ಪರ ವಕೀಲ ಹನುಮಂತರಾಯ ವಾದ ಮಂಡನೆ ಮಾಡಿದರು ಈ ವೇಳೆ ನ್ಯಾಯಾಧೀಶರು, ವಿಚಾರಣೆಗೆ ಬಂದರೆ, ಅರೆಸ್ಟ್ ಮಾಡುತ್ತಾರೆ ಎಂದು ಹೇಗೆ ಹೇಳುತ್ತೀರಿ?, ಪ್ರೆಸ್ ನೋಟ್ ಬಂದ ತಕ್ಷಣವೇ, ಪೊಲೀಸರು ಅರೆಸ್ಟ್ ಮಾಡುತ್ತಾರಾ? ನೀವು ಪ್ರೆಸ್ ನೋಟನ್ನೇ ತೆಗೆದುಕೊಂಡು ಅದರ ಮೇಲೆ ಹೇಗೆ ವಾದ ಮಾಡುತ್ತೀರಿ? ಪ್ರೆಸ್ ನೋಟ್ ಮೇಲೆ ವಾದ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
Advertisement
ಇದಕ್ಕೆ ಉತ್ತರಿಸಿದ ರೆಡ್ಡಿ ಪರ ವಕೀಲ ಹನುಮಂತರಾಯ, ಇದು ಪೊಲೀಸ್ ಇಲಾಖೆಯ ಪ್ರೆಸ್ ನೋಟ್ ಆಗಿದ್ದು, ಈ ಬಗ್ಗೆ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಒಂದು ವೇಳೆ ನಮ್ಮ ಕಕ್ಷಿದಾರ ಭಾನುವಾರ ವಿಚಾರಣೆಗೆ ಹೋದರೆ, ಅವರನ್ನು ಆ ಕ್ಷಣವೇ ಬಂಧಿಸಿದರೇ ಏನು ಮಾಡಬೇಕು? ಭಾನುವಾರ ಸಿಸಿಬಿ ವಿಚಾರಣೆಗೆ ನಾವು ಹೋಗಲು ಸಿದ್ಧ, ಆದರೆ ಅರೆಸ್ಟ್ ಮಾಡದಂತೆ ಆದೇಶ ನೀಡಿ. ಬಂಧನದ ಭೀತಿ ಇರುವುದರಿಂದ ನಮಗೆ ಜಾಮೀನು ಕೊಡಿ. ಸೋಮವಾರ ಹೈಕೋರ್ಟ್ ನಲ್ಲಿ ವಾದ ಮಾಡಿ ಇತ್ಯರ್ಥ ಮಾಡಿಕೊಳ್ತೇವೆ ಎಂದು ಹೇಳಿದರು.
Advertisement
ಈ ವೇಳೆ ಸಿಸಿಬಿ ಪರ ವಕೀಲರು ಮಧ್ಯಪ್ರವೇಶಿಸಿ, ನಮ್ಮ ವಾದವನ್ನು ಕೇಳಲು ಅವಕಾಶ ಮಾಡಿಕೊಡಿ. ಮೇಲ್ನೋಟಕ್ಕೆ ಪ್ರಕರಣದಲ್ಲಿ ರೆಡ್ಡಿಯವರ ಅಪರಾಧವಿದೆ. ಆಂಬಿಡೆಂಟ್ ಗ್ರಾಹಕರ ವಾದವನ್ನು ಕೇಳಲು ಮನವಿ ಮಾಡಿಕೊಡಿ ಎಂದು ಕೇಳಿಕೊಂಡರು.
ವಾದ-ವಿವಾದ ಆಲಿಸಿದ ನ್ಯಾಯಾಧೀಶರು, ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿಗೆ ಆಕ್ಷೇಪಣೆಗೆ ಕಾಲಾವಕಾಶ ನೀಡಿದರು. ಅಲ್ಲದೇ ಆಂಬಿಡೆಂಟ್ ಗ್ರಾಹಕರ ವಾದವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಮೇಲ್ನೋಟಕ್ಕೆ ಬಂಧನದ ಭೀತಿ ಕಾಣುತ್ತಿಲ್ಲ ಎಂದು ಹೇಳಿ ಜನಾರ್ದನ ರೆಡ್ಡಿಯವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದರು.
ಕಲಾಪದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರೆಡ್ಡಿ ಪರ ವಕೀಲರು, ಜನರ್ದಾನ ರೆಡ್ಡಿಯವರ ವಿಚಾರಣೆಗಿಂತ ಪ್ರಮುಖ ಬೆಳವಣಿಗೆಗಳು ನಡೆದಿದ್ದು, ಎಸಿಪಿ ವೆಂಕಟೇಶ್ ಪ್ರಸಾದ್ ಹಾಗೂ ಡಿಸಿಪಿ ಗಿರೀಶ್ ಅಧಿಕಾರಿಗಳು ಪ್ರಕರಣದ ನಾಲ್ಕನೇ ಆರೋಪಿಯನ್ನು ಥಳಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ರಮೇಶ್ ಮಾನವ ಹಕ್ಕು ಆಯೋಗಕ್ಕೆ ದೂರು ಕೊಟ್ಟಿದ್ದರು. ದೂರು ಕೊಟ್ಟ ಬಳಿಕ ಸುಮಾರು 15 ಜನ ಪೊಲೀಸರು ರಮೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಆದರೆ ಸಾರ್ವಜನಿಕ ಸ್ಥಳದಲ್ಲೇ ಇದ್ದ ಕಾರಣ ಹಲ್ಲೆ ಮಾಡಲು ಸಾಧ್ಯವಾಗಿಲ್ಲ ಎಂದು ಗಂಭೀರವಾಗಿ ಆರೋಪ ಮಾಡಿದರು.
ಈ ಬಗ್ಗೆ ಇಬ್ಬರು ಅಧಿಕಾರಿಗಳನ್ನು ತನಿಖೆಯಿಂದ ಕೈಬಿಡುವಂತೆ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದೇವೆ. ಅಲ್ಲದೇ ಭಾನುವಾರ ವಿಚಾರಣೆಗೆ ಆಗಮಿಸುವಂತೆ ಸಿಸಿಬಿ ನೋಟಿಸ್ ನೀಡಿದ್ದು, ಈಗಾಗಲೇ ನೋಟಿಸ್ ಪತ್ರ ಕೈ ತಲುಪಿದೆ. ಹೀಗಾಗಿ ಭಾನುವಾರದ ವಿಚಾರಣೆಗೆ ಹಾಜರಾಗಬೇಕೋ ಅಥವಾ ಬೇಡವೇ ಎಂಬುದರ ಬಗ್ಗೆ ಶನಿವಾರ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/