– ಎರಡು ಸಮುದಾಯಗಳ ನಡುವೆ ಜಟಾಪಟಿ, ಲಘು ಲಾಠಿ ಪ್ರಹಾರ
ಚಿಕ್ಕಬಳ್ಳಾಪುರ: ಗ್ರಾಮದ ಅಂಬೇಡ್ಕರ್ ಭವನದ (Ambedkar Bhavan) ಮುಂಭಾಗ ಖಾಲಿ ಜಾಗದಲ್ಲಿ ರಾತ್ರೋ ರಾತ್ರಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಇದರಿಂದ ಮತ್ತೊಂದು ಸಮುದಾಯ ಅಂಬೇಡ್ಕರ್ ಪ್ರತಿಮೆಗೆ ಅಡ್ಡಲಾಗಿ ವಾಲ್ಮೀಕಿ ಭಾವಚಿತ್ರದ ನಾಮಫಲಕ ಅನಾವರಣ ಮಾಡಲಾಗಿದೆ. ಇದರಿಂದ ಎರಡು ಸಮುದಾಯಗಳ ನಡುವೆ ಜಟಾಪಟಿ ನಡೆದು ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ ಗ್ರಾಮದಲ್ಲಿಂದು ಅಂಬೇಡ್ಕರ್ ಜಯಂತಿ ಇದ್ದು ರಾತ್ರೋ ರಾತ್ರಿ ಗ್ರಾಮದಲ್ಲಿ ಇರುವ ಅಂಬೇಡ್ಕರ್ ಭವನದ ಮುಂದೇ ಇರುವ ಸರ್ಕಾರಿ ಖಾಲಿ ಜಾಗದ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿದ್ದಾರೆ. ಈಗ ಅದೇ ಜಾಗದಲ್ಲಿ ಹಂಪಸಂದ್ರದ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘದಿಂದ ವಾಲ್ಮೀಕಿ ನಾಮಫಲಕ ಇಟ್ಟಿದ್ದಾರೆ. ಇದ್ರಿಂದ ಎರಡು ಸಮುದಾಯಗಳ ನಡುವೆ ವಿವಾದ ಸೃಷ್ಟಿಯಾಗಿ ಪರ-ವಿರೋಧದ ಪ್ರತಿಭಟನೆಗಳು ನಡೆಯುತ್ತಿವೆ. ಎರಡು ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದು ಲಘು ಲಾಠಿ ಪ್ರಹಾರ ಸಹ ನಡೆಸಿದ್ದಾರೆ.
ಒಂದು ಕಡೆ ಅಂಬೇಡ್ಕರ್ ಫೋಟೋ ಇಟ್ಟುಕೊಂಡು ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದು ಮತ್ತೊಂದು ಕಡೆ ಮಹರ್ಷಿ ವಾಲ್ಮೀಕಿಗೆ ಫೋಟೋ ಇಟ್ಟುಕೊಂಡು ರಸ್ತೆಯಲ್ಲಿ ಧರಣಿ ಕುಳಿತಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಪೋಲಿಸರು ಸರ್ಪಗಾವಲು ಹಾಕಿದ್ದಾರೆ. ಎರಡು ಸಮುದಾಯದ ನಡುವೆ ಶಾಂತಿ ಸಭೆ ಮಾಡಲು ತಹಸೀಲ್ದಾರ್ ಮಹೇಶ್ ಪತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದೆ.