-ಏಪ್ರಿಲ್ 2ಕ್ಕೆ ಸ್ಪರ್ಧೆ ಬಗ್ಗೆ ರೆಬೆಲ್ ಸ್ಟಾರ್ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತ್ತು ಮುಖಂಡರು ತಮ್ಮ ಸ್ವಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದ್ರೆ ಮಂಡ್ಯದ ಗಂಡು, ಶಾಸಕರಾಗಿರುವ ಅಂಬರೀಶ್ ಮಾತ್ರ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನವನ್ನು ಮೂಡಿಸಿದೆ.
ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಇಂದು ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅಂಬರೀಶ್‍ನ್ನು ಸ್ಯಾಂಕಿ ರಸ್ತೆಯಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸದಲ್ಲಿ ಭೇಟಿಮಾಡಿದ್ರು. ಚುನಾವಣೆ ಘೋಷಣೆ ಆಗಿದ್ದರು ಅಂಬರೀಶ್ ಇದುವರೆಗೆ ಕೆಪಿಸಿಸಿ ನಾಯಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಭೇಟಿ ಮಾಡಿ, ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಂಬರೀಶ್, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಪ್ರತಿಯೊಂದು ಹೆಜ್ಜೆಯನ್ನು ತುಂಬಾ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಒಂದು ಸಣ್ಣ ತಪ್ಪಿನಿಂದಾಗಿ 45 ವರ್ಷದ ರಾಜಕೀಯ ಜೀವನವನ್ನು ನಾನು ಹಾಳು ಮಾಡಿಕೊಳ್ಳಲಾರೆ. ನಾನು ಸಿಂಗಪೂರ್‍ಗೆ ಹೋಗಿ ಬಂದ ಮೇಲೆ ಹಿಂದಿನ ಶಕ್ತಿ ಉಳಿದಿಲ್ಲ. ಆದರೂ ಏಪ್ರಿಲ್ 2 ರಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಅಂತಾ ಅಂದ್ರು.