ಮಂಡ್ಯ: ಸಕ್ಕರೆನಾಡು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಆದರೆ ಪ್ರಭಾವಿ ನಾಯಕರಾದ ಹಿರಿಯ ನಟ ಅಂಬರೀಶ್ ಮತ್ತು ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಇಬ್ಬರು ಚುನಾವಣೆ ಪ್ರಚಾರಕ್ಕೆ ಬಾರದೇ ಇರುವುದು ಮಂಡ್ಯ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಂಡ್ಯ ಕಾಂಗ್ರೆಸ್ಸಿನಲ್ಲಿ ಹೆಚ್ಚು ಅಂಬರೀಶ್ ಮತ್ತು ರಮ್ಯಾ ಇಬ್ಬರು ಚರ್ಚೆಗೆ ಒಳಗಾದವರು. ಅಂಬರೀಶ್ ಮತ್ತು ರಮ್ಯಾ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಂತಾಗ ಪಕ್ಷದ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು, ಅವರ ಪರವಾಗಿ ನಿರಂತರವಾಗಿ ಪ್ರಚಾರ ನಡೆಸಿದ್ದರು. ಆದರೆ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಎಲ್ಲ ಪಕ್ಷಗಳ ಕಾರ್ಯಕರ್ತರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರಬೇಕಾಗಿದ್ದ ರಮ್ಯಾ ಮತ್ತು ಅಂಬರೀಶ್ ಮಾತ್ರ ಜಿಲ್ಲೆಯ ಕಡೆ ತಲೆ ಹಾಕದೇ ನಾಪತ್ತೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ.
Advertisement
Advertisement
ಅಂಬರೀಶ್ ಮತ್ತು ರಮ್ಯಾ ಅವರು ಬಂದಿಲ್ಲ ಅಂದರು ನಾವು ಧೃತಿಗೆಡಲ್ಲ. ಅವರ ಮೇಲೆ ಜವಾಬ್ದಾರಿ ಇದೆ. ಅದನ್ನು ಅರಿತು ಅವರಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರಬೇಕಿತ್ತು. ಇಬ್ಬರು ನಾಯಕರು ಮುಂದಿನ ದಿನಗಳಲ್ಲಿ ಯಾವ ರೀತಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ ಕಾದು ನೋಡೋಣ ಎಂದು ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಬಾಬು ಹೇಳಿದ್ದಾರೆ.
Advertisement
ಇನ್ನು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ಏಳು ಕ್ಷೇತ್ರದಲ್ಲೂ ಜೆಡಿಎಸ್ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಸಂಪೂರ್ಣವಾಗಿ ಸೋಲನ್ನು ಕಂಡಿತ್ತು. ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಸ್ಥಿತಿಗೆ ರಮ್ಯಾ ಮತ್ತು ಅಂಬರೀಶ್ ಕೂಡ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಆದರೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಾದರೂ ಮತ್ತೆ ಕಾಂಗ್ರೆಸ್ ಪಕ್ಷ ಪ್ರಭುತ್ವ ಸ್ಥಾಪಿಸಿ, ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಬೇಕು ಎಂದು ಹಲವು ನಾಯಕರು ಹೋರಾಡುತ್ತಿದ್ದಾರೆ.
Advertisement
ಅಷ್ಟೇ ಅಲ್ಲದೇ ಈ ಹಿಂದೆ ರಮ್ಯಾ ಮತ್ತು ಅಂಬರೀಷ್ ಅವರಿಗಾಗಿ ದುಡಿದವರು ಈಗ ಚುನಾವಣೆಗೆ ನಿಂತಿದ್ದಾರೆ. ಹೀಗಾಗಿ ಅವರಿಗಾಗಿ ಅಂಬರೀಶ್ ಮತ್ತು ರಮ್ಯಾ ಚುನಾವಣಾ ಪ್ರಚಾರಕ್ಕೆ ಬರಬೇಕು. ಈ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇವೆ ಅಂತಾ ಕೆಲವು ನಾಯಕರು ಹೇಳುತ್ತಿದ್ದಾರೆ. ಮತ್ತೆ ಕೆಲವು ನಾಯಕರು ಅವರಿಬ್ಬರ ಬಗ್ಗೆ ಮಾತನಾಡುವುದೇ ಬೇಡ ಅಂತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv