ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆ

Public TV
1 Min Read
AMBAREESH BODY

ಬೆಂಗಳೂರು: ಮಾಜಿ ಸಚಿವ, ಹಿರಿಯ ಚಲನಚಿತ್ರ ನಟ ಅಂಬರೀಶ್(66) ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ ಸ್ಮಾರಕದ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ತಿಳಿಸಿದರು.

ಭಾನುವಾರ ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗುತ್ತಿದೆ. ಅಂತಿಮ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಗೊಳಿಸಲಾಗಿದೆ. ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಗರದ ವಿಕ್ರಂ ಆಸ್ಪತ್ರೆಗೆ ಅಂಬರೀಶ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ ನಿಧನರಾದರು. ಅಂಬರೀಶ್ ಪತ್ನಿ, ಹಿರಿಯ ನಟಿ ಸುಮಲತಾ ಪುತ್ರ ಅಭಿಷೇಕ್ ಗೌಡ ಅವರನ್ನು ಅಗಲಿದ್ದಾರೆ.

ambareesh sumalatha

ಸಿಎಂ ಕಂಬನಿ
ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ. ನನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು. ಅಂಬರೀಶ್ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಹಾಗಾಗಿಯೇ ಅವರು ಪ್ರತಿಯೊಬ್ಬರ ಗೌರವಕ್ಕೆ ಪಾತ್ರರಾಗಿದ್ದರು. ಅಂಬರೀಷ್ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೂ ಹಾಗೂ ಅಪಾರ ಅಭಿಮಾನಿಗಳಿಗೂ ನೀಡಲಿ ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.

https://www.youtube.com/watch?v=ApIo8O24SeU

Share This Article
Leave a Comment

Leave a Reply

Your email address will not be published. Required fields are marked *