ಮುಂಬೈ: ಮಹಿಳಾ ವಿಶ್ವಕಪ್ ಕಿಕ್ರೆಟ್ (Womens Cricket Worldcup) ಟೂರ್ನಿ ವೇಳೆಯೇ ಟೀಂ ಇಂಡಿಯಾ ಆಟಗಾರ್ತಿ ಅಮನ್‌ಜೋತ್ ಕೌರ್ (Amanjot Kaur) ಅಜ್ಜಿಗೆ ಹೃದಯಾಘಾತ ಸಂಭವಿಸಿತ್ತು. ಆದರೆ ವಿಶ್ವಕಪ್ ನಡೆಯುತ್ತಿದ್ದರಿಂದ ಕೌರ್‌ಗೆ ಕುಟುಂಬಸ್ಥರು ವಿಷಯ ತಿಳಿಸಿರಲಿಲ್ಲ.
ಟೀಂ ಇಂಡಿಯಾದ ಆಲ್‌ರೌಂಡರ್ ಆಟಗಾರ್ತಿ ಅಮನ್‌ಜೋತ್ ಕೌರ್. ಭಾನುವಾರದ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಯೊಂದಿಗೆ ಅಬ್ಬರಿಸಿ ಶತಕ ಸಿಡಿಸಿದ್ದ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ (Laura Wolvaardt) ಕ್ಯಾಚ್ ಹಿಡಿದು ಮ್ಯಾಚ್‌ಗೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು. ಕ್ಯಾಚ್ ಹಿಡಿಯುವ ಸಮಯದಲ್ಲಿ ಚೆಂಡು ಮೂರು ಬಾರಿ ಮೇಲಕ್ಕೆ ಚಿಮ್ಮಿತ್ತು. ಆದರೆ ಕೊನೆಗೆ ಬಲಕೈಯಲ್ಲಿ ಹಿಡಿಯವ ಮೂಲಕ ಟ್ವಿಸ್ಟ್ ನೀಡಿ ಭಾರತದತ್ತ ಪಂದ್ಯವನ್ನು ವಾಲಿಸಿದರು. ಇದನ್ನೂ ಓದಿ: CWC 2025 | ಪಂದ್ಯದ ಗತಿ ಬದಲಿಸಿದ 42ನೇ ಓವರ್ ಮತ್ತು ಆ ಒಂದು ಕ್ಯಾಚ್!
A huge moment in the match! 🔥🫡
South African skipper, #LauraWolvaardt departs as #AmanjotKaur holds on to a pressure catch!
Is #TeamIndia edging closer to its first-ever glory? 😍#CWC25 Final 👉 #INDvSA, LIVE NOW 👉 https://t.co/gGh9yFhTix pic.twitter.com/kKR4nL8x7j
— Star Sports (@StarSportsIndia) November 2, 2025
ಪಂಜಾಬ್‌ನ ಮೊಹಾಲಿ ಮೂಲದವರಾದ ಅಮನ್‌ಜೋತ್ ಕೌರ್ ತಂದೆ ಭೂಪಿಂದರ್ ಸಿಂಗ್. ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಾರೆ. ತುಂಬಾ ಕಡುಬಡತನದ ಕುಟುಂಬ. ಅಮನ್‌ಜೋತ್ ಕ್ರಿಕೆಟ್ ಆಡ್ತಾಳೆ ಅಂದಾಗ ಅವರ ಸಮಾಜದವರು ವಿರೋಧಿಸಿದ್ದರು.
ಸುದ್ದಿ ಮಾಧ್ಯಮದೊಂದಿಗೆ ಅಮನ್‌ಜೋತ್ ತಂದೆ ಭೂಪಿಂದರ್ ಸಿಂಗ್ ಮಾತನಾಡಿ, ಬಾಲ್ಯದಲ್ಲಿ ಹುಡುಗರ ಜೊತೆ ಆಟವಾಡುವಾಗ ಅಮನ್‌ಜೋತ್ ಬಳಿ ಬ್ಯಾಟ್ ಇಲ್ಲ ಛೇಡಿಸಿದ್ದರು. ಇದನ್ನು ನೋಡಿದ್ದ ಅಜ್ಜಿ ಅಂದು ನನಗೆ ಹೇಳಿದ್ದರು. ಆ ರಾತ್ರಿಯೇ ಮರದ ಹಲಗೆಯಲ್ಲಿ ಬ್ಯಾಟ್ ಮಾಡಿ ಕೊಟ್ಟಿದ್ದೆ. ಆಮೇಲೆ ಅಜ್ಜಿಯೇ ಅಮನ್‌ಜೋತ್ ಜೊತೆ ಆಡುತ್ತಿದ್ದರು. ಹಾಗಾಗಿ ಅಜ್ಜಿಯೇ ಮೊದಲ ಕೋಚ್ ಆಗಿದ್ದರು. ಅದೇ ಅಜ್ಜಿಗೆ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿತ್ತು. ಆದರೆ ಆಟದ ಮೇಲೆ ಪರಿಣಾಮ ಬೀರಬಾರದೆಂದು ಈ ವಿಷಯ ಹೇಳಿರಲಿಲ್ಲ. ಜೊತೆಗೆ ಅಜ್ಜಿಗೆ ಆಸ್ಪತ್ರೆಗೆ ದಾಖಲಿಸಿದಾಗಲೂ ಈ ವಿಷಯವನ್ನು ತಿಳಿಸಿರಲಿಲ್ಲ ಎಂದಿದ್ದಾರೆ.
2016ರಲ್ಲಿ ಹಿರಿಯರು, ನೆರೆಹೊರೆಯವರು ಸೂಚಿಸಿದಾಗ 15 ವರ್ಷದವಳಿದ್ದ ಅಮನ್‌ಜೋತ್‌ನ್ನು ಸ್ಕೂಟರ್‌ನಲ್ಲಿ ಮೊಹಾಲಿಯಿಂದ ಚಂಡೀಗಢನಲ್ಲಿದ್ದ ಅಕಾಡೆಮಿಗೆ ಕರೆದೊಯ್ಯುತ್ತಿದ್ದೆ. ಎಷ್ಟೋ ಬಾರಿ ತರಬೇತಿಯ ಹಣಕ್ಕಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದೆ. ಇದೀಗ ಮಗಳು ಸೂಪರ್ ಕ್ಯಾಚ್ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಕಂಡು ಖುಷಿಯಾಗಿದೆ ಎಂದು ಆನಂದಭಾಷ್ಪ ಸುರಿಸಿದ್ದಾರೆ.
2025ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. 299ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು 45.3 ಓವರ್‌ಗಳಲ್ಲಿ 246ರನ್‌ಗೆ ಆಲೌಟ್ ಮಾಡಿತು.
52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಯಿತು. ಈ ಮೂಲಕ ಐಸಿಸಿ ಬಹುಮಾನವಾದ 39.55 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಬಿಸಿಸಿಐ ಚಾಂಪಿಯನ್ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಇದರ ಜೊತೆ ಗ್ರೂಪ್ ಹಂತದ ಪಂದ್ಯಗಳ ಗೆಲುವಿನಿಂದ 90.87 ಲಕ್ಷ ರೂ., ಟೂರ್ನಿಯಲ್ಲಿ ಭಾಗಿಯಾಗಿದ್ದ ಶುಲ್ಕವಾದ 2.20 ಕೋಟಿ ರೂ. ಸೇರಿದಂತೆ ಒಟ್ಟು 93.66 ಕೋಟಿ ರೂ. ಹರ್ಮನ್‌ಪ್ರೀತ್ ತಂಡದ ಪಾಲಾಗಿದೆ.ಇದನ್ನೂ ಓದಿ: ಕೊನೆಗೂ ಕನಸು ನನಸು – ಭಾರತ ಈಗ ವಿಶ್ವ ಮಹಿಳಾ ಕ್ರಿಕೆಟಿಗೆ ಬಾಸ್

