Connect with us

Cinema

ಲವ್ ಮಾಕ್‍ಟೇಲ್ ನೋಡಿ ಮೂಕವಿಸ್ಮಿತರಾದ ಅಲ್ಲು ಅರ್ಜುನ್ ಸೋದರ

Published

on

ಹೈದರಾಬಾದ್: ಲವ್ ಮಾಕ್‍ಟೇಲ್ ಸಿನಿಮಾ ಥಿಯೇಟರ್ ನಲ್ಲಿ ತಡವಾಗಿ ಸದ್ದು ಮಾಡಿದರೂ ಆನ್‍ಲೈನ್ ಪ್ಲಾಟ್‍ಫಾರ್ಮ್‍ನಲ್ಲಿ ಹೈ ಸ್ಪೀಡ್‍ನಲ್ಲಿ ಓಡುತ್ತಿದೆ. ಇದಕ್ಕೆ ಸಾಕ್ಷಿ ತೆಲುಗು ನಟರು ಸೇರಿದಂತೆ ಬಹುತೇಕರು ಈ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಹಲವರು ತೆಲುಗು ಸಿನಿಮಾಗಳನ್ನು ನೋಡಿ ಮೆಚ್ಚುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ತೆಲುಗು ನಟರೇ ಕನ್ನಡ ಸಿನಿಮಾವನ್ನು ಹಾಡಿಹೊಗಳಿದ್ದಾರೆ.

ಲವ್ ಮಾಕ್‍ಟೇಲ್ ಸಿನಿಮಾ ಥಿಯೇಟರ್‍ಗಳಲ್ಲಿ ಮೊದಲು ಸದ್ದು ಮಾಡಲಿಲ್ಲ. ಅಲ್ಲದೆ ಕೇವಲ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಹಂತಕ್ಕೆ ತಲುಪಿತ್ತು. ಇದಾದ ಬಳಿಕ ನಿರ್ಮಾಪಕ, ನಿರ್ದೇಶಕ, ನಾಯಕ ನಟ ಡಾರ್ಲಿಂಗ್ ಕೃಷ್ಣಾ ಅವರು ಮಲ್ಟಿಫ್ಲೆಕ್ಸ್ ಗಳ ಮಾಲೀಕರ ಬಳಿ ಗೋಗರೆದು ಸಿನಿಮಾ ದಿನಕ್ಕೊಂದು ಶೋಗೆ ಅವಕಾಶ ನೀಡುವಂತೆ ಕೇಳಿಕೊಂಡರು. ನಂತರ ಹಂತ ಹಂತವಾಗಿ ಥಿಯೇಟರ್ ಹಾಗೂ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಇದಾದ ಬಳಿಕ ಓಟಿಟಿ ಪ್ಲಾಟ್‍ಫಾರ್ಮ್ ಗೆ ಬಂತು.

ಓಟಿಟಿ ಪ್ಲಾಟ್‍ಫಾರ್ಮ್ ನಲ್ಲಿ ಪ್ರೇಕ್ಷಕರು ಇನ್ನೂ ನೋಡಿ ಆನಂದಿಸುತ್ತಿದ್ದಾರೆ. ಅಲ್ಲದೆ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹಲವರು ಚಿತ್ರ ಮೆಚ್ಚಿ ಡಾರ್ಲಿಂಗ್ ಕೃಷ್ಣ ಅವರಿಗೆ ಹಣವನ್ನೂ ಕಳುಹಿಸುತ್ತಿದ್ದಾರಂತೆ. ಇಷ್ಟೆಲ್ಲ ಮೆಚ್ಚುಗೆಯನ್ನು ಲವ್ ಮಾಕ್‍ಟೇಲ್ ಗಳಿಸಿದೆ. ಕನ್ನಡದಲ್ಲಿ ಇತ್ತೀಚೆಗೆ ತೆರೆ ಕಂಡ ವಿಭಿನ್ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದ ಯಶಸ್ಸನ್ನು ಕಂಡು ಡಾರ್ಲಿಂಗ್ ಕೃಷ್ಣಾ ಸಹ ಇದೇ ಕಥೆಯ ಹಂದರ ಇಟ್ಟುಕೊಂಡು ಭಾಗ-2 ಮಾಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಮಾಡಿದ್ದಾರಂತೆ.

ಇದೆಲ್ಲ ಇರಲಿ ಇದೀಗ ಪರಭಾಷೆಯ ನಟರೊಬ್ಬರು ಲವ್ ಮಾಕ್‍ಟೇಲ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಅದೂ ಬೇರೆ ಯಾರೂ ಅಲ್ಲ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ತಮ್ಮ ಅಲ್ಲು ಸಿರೀಶ್. ಹೌದು ಅಲ್ಲು ಸಿರೀಶ್ ಅವರು ಇತ್ತೀಚೆಗೆ ಈ ಸಿನಿಮಾವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ತುಂಬಾ ಇಷ್ಟವಾಗಿದೆಯಂತೆ ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾ ಕುರಿತು ಸಿನಿಮಾದ ಪೋಸ್ಟರ್ ಟ್ವೀಟ್ ಮಾಡಿರುವ ಅವರು, ಅಮೇಜಾನ್ ಪ್ರೈಮ್‍ನಲ್ಲಿ ‘ಲವ್ ಮಾಕ್‍ಟೇಲ್’ ಕನ್ನಡ ಚಿತ್ರವನ್ನು ನೋಡಿದೆ. ಸಿನಿಮಾ ತುಂಬಾ ಇಷ್ಟವಾಯಿತು. ಹೃದಯಕ್ಕೆ ಮುದ ನೀಡಿತು. 90 ಹಾಗೂ 2000ರ ಆಸುಪಾಸಿನ ಹುಡುಗರು ಈ ಸಿನಿಮಾವನ್ನು ಹೆಚ್ಚು ಪ್ರೀತಿಸುತ್ತಾರೆ. ಟ್ಯೂಶನ್ ಕ್ರಷಸ್, ಎಸ್‍ಎಂಎಸ್ ದಿನಗಳು, ಗಲ್ಲಿ ಕ್ರಿಕೆಟ್, ಪ್ರಿ ಸ್ಮಾರ್ಟ್ ಫೋನ್ ಲವ್ ಇವೆಲ್ಲವುಗಳು ನನ್ನನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋದದವು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ.

ಇದಕ್ಕೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲು ಸಿರೀಶ್ ಪ್ರತಿಕ್ರಿಯಿಸಿ, ನಿರ್ದೇಶನ ಹಾಗೂ ನಟನೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ. ಇಂತಹ ಒಳ್ಳೆಯ ಚಿತ್ರ ಮಾಡಿದ್ದಕ್ಕೆ ನಾನೇ ನಿಮಗೆ ಧನ್ಯವಾದಗಳನ್ನು ಹೇಳಬೇಕು ಎಂದು ಕನ್ನಡದಲ್ಲೇ ತಿಳಿಸಿದ್ದಾರೆ.

ಅಲ್ಲು ಸಿರೀಶ್ ಅವರಿಗೆ ಮೊದಲಿನಿಂದಲೂ ಕನ್ನಡದ ಸಿನಿಮಾಗಳ ಮೇಲೆ ಒಲವು. ಕನ್ನಡ ಚಿತ್ರರಂಗದ ಜೊತೆಗೆ ನಿಕಟ ಸಂಪರ್ಕವನ್ನೂ ಹೊಂದಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಕರ್ನಾಟಕ, ಕನ್ನಡ ಎಂದರೆ ವಿಶೇಷ ಆಸಕ್ತಿ. ಈಗ ಕನ್ನಡದ ಸಿನಿಮಾ ನೋಡಿ ಹಾಡಿ, ಹೊಗಳಿದ್ದಾರೆ.

Click to comment

Leave a Reply

Your email address will not be published. Required fields are marked *