ಹೈದರಾಬಾದ್: ತೆಲಂಗಾಣ ಹೈಕೋರ್ಟ್‌ನಲ್ಲಿ ನಡೆದಅಲ್ಲು ಅರ್ಜುನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ನಟನ ಪರ ವಕೀಲರು ಶಾರುಖ್ ಖಾನ್ (Shah Rukh Khan) ಅವರ ರಾಯೀಸ್ ಪ್ರಕರಣವನ್ನು ಉಲ್ಲೇಖಿಸಿದ್ದರು.
ಜಾಮೀನು ಅರ್ಜಿ ವಿಚಾರಣೆ ವೇಳೆ, ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯುವಂತೆ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಥಿಯೇಟರ್ ಆಡಳಿತಕ್ಕೆ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೇ ವಿಶೇಷ ಪ್ರದರ್ಶನಕ್ಕೆ ಹಾಜರಾಗದಂತೆ ನಟನಿಗೆ ತಿಳಿಸುವಂತೆ ಎಸ್‌ಎಚ್‌ಒ ಥಿಯೇಟರ್‌ಗೆ ತಿಳಿಸಿದ್ದರು ಎಂದು ಸರ್ಕಾರಿ ವಕೀಲರು ವಾದಿಸಿದರು.
ಇದಕ್ಕೆ ಅಲ್ಲು ಅರ್ಜುನ್ ಪರ ವಕೀಲರು, ಪೊಲೀಸರು ನೀಡಿದ ಸೂಚನೆಗಳು ಅಸ್ಪಷ್ಟವಾಗಿದೆ. ನಟನ ಉಪಸ್ಥಿತಿಯು ಸಾವಿಗೆ ಕಾರಣವಾಗುತ್ತದೆ ಎಂದು ಪೊಲೀಸರು ಸೂಚಿಸಿರಲಿಲ್ಲ. ನಟರು ತಮ್ಮ ಸಿನಿಮಾದ ಮೊದಲ ಪ್ರದರ್ಶನಗಳಿಗೆ ಹಾಜರಾಗುವುದು ಸಾಮಾನ್ಯ ಸಂಗತಿ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ರೇವಂತ್ ರೆಡ್ಡಿ ಹೆಸರು ಹೇಳದ್ದಕ್ಕೆ ಬಂಧನ – ಸಿಎಂ ವಿರುದ್ಧ ಸಿಡಿದ ಅಲ್ಲು ಅಭಿಮಾನಿಗಳು
ಸಂತ್ರಸ್ತರು ಕೆಳಗಿನ ಪ್ರದೇಶದಲ್ಲಿ ಸಿಲುಕಿದ್ದಾಗ ಕಾಲ್ತುಳಿತ ಸಂಭವಿಸಿದೆ ಎಂಬ ಆರೋಪವಿದೆ. ಕಾಲ್ತುಳಿತ ಸಂಭವಿಸಿದ ಸಮಯದಲ್ಲಿ ಅಲ್ಲು ಅರ್ಜುನ್ ಮೊದಲ ಮಹಡಿಯಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರು 2017ರಲ್ಲಿ ಬಿಡುಗಡೆಯಾದ ಶಾರುಖ್ ನಟನೆಯ ರಾಯಿಸ್ ಚಿತ್ರದ ಪ್ರಚಾರ ವೇಳೆ ನಡೆದ ಕಾಲ್ತುಳಿತ ಪ್ರಕರಣವನ್ನು ಉಲ್ಲೇಖಿಸಿ, ಗುಜರಾತ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಶಾರುಖ್ ಖಾನ್ ಅವರಿಗೆ ರಿಲೀಫ್ ನೀಡಿತ್ತು. ಸಂತ್ರಸ್ತನ ದುಡುಕಿನ ನಿರ್ಧಾರದಿಂದ ಈ ಘಟನೆ ಸಂಭವಿಸಿದೆ. ಈ ಘಟನೆಗೂ ಶಾರುಖ್ ಖಾನ್ ನೇರವಾದ ಸಂಬಂಧ ಏನು ಎಂದು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿತ್ತು ಎಂದು ಹೇಳಿ ಈ ಪ್ರಕರಣದ ತೀರ್ಪನ್ನು ಓದಿದರು. ಇದನ್ನೂ ಓದಿ:1 ತಿಂಗಳ ಹಿಂದೆಯಷ್ಟೇ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ನಿಂದ ರಿಲೀಫ್ ಪಡೆದಿದ್ದ ಅಲ್ಲು ಅರ್ಜುನ್
ತೆಲಂಗಾಣ ಹೈಕೋರ್ಟ್ ಆದೇಶ ಏನು?
ಈ ಕೇಸಲ್ಲಿ ಹಾಕಿದ ಬಿಎನ್‌ಎಸ್ ಕಾಯ್ದೆ 105, 118(1)(3)) ಸೆಕ್ಷನ್‌ಗಳು ಅಲ್ಲು ಅರ್ಜುನ್‌ಗೆ ಅನ್ವಯ ಆಗುವುದಿಲ್ಲ. ನಟನಾದ ಮಾತ್ರಕ್ಕೆ ಸಾಮಾನ್ಯ ಪೌರರಿಗೆ ಅನ್ವಯವಾಗುವ ರಿಯಾಯ್ತಿಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ನಟ ಎಂಬ ಕಾರಣಕ್ಕೆ ಈ ಸೆಕ್ಷನ್‌ಗಳನ್ನು ಅನ್ವಯಿಸೋದು ಎಷ್ಟು ಸರಿ? ರೇವತಿ ಕುಟುಂಬದ ಬಗ್ಗೆ ಸಹಾನುಭೂತಿ ಇದೆ. ಹಾಗೆಂದ ಮಾತ್ರಕ್ಕೆ ಆರೋಪವನ್ನು ಒಬ್ಬರ ಮೇಲೆ ಹಾಕಲು ಬರುವುದಿಲ್ಲ. ನಟ ಅಲ್ಲು ಅರ್ಜುನ್‌ಗೆ ಕೂಡ ಜೀವಿಸುವ ಹಕ್ಕು ಇದೆ.
ಏನಿದು ರಾಯಿಸ್ ಕಲ್ತುಳಿತ ಪ್ರಕರಣ?
ಜನವರಿ 2017 ರಲ್ಲಿ ಶಾರುಖ್ ಮತ್ತು ಚಿತ್ರ ತಂಡ Raees ಪ್ರಚಾರದ ಭಾಗವಾಗಿ ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಿತ್ತು. ವಡೋದರಾ ರೈಲು ನಿಲ್ದಾಣದಲ್ಲಿ ನಟನನ್ನು ನೋಡಲು 15,000 ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಮಂದಿ ಗಾಯಗೊಂಡಿದ್ದರೆ ಒಬ್ಬರು ಸಾವನ್ನಪ್ಪಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ಶಾರುಖ್ ಖಾನ್ ಮಾಡಿದ ತಪ್ಪು ಏನು? ಅವರು ಸೆಲೆಬ್ರಿಟಿ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಹಕ್ಕುಗಳಿಲ್ಲ ಎಂದು ಅರ್ಥವಲ್ಲ. ಯಾರಾದರೂ ರೈಲಿನಲ್ಲಿ ಪ್ರಯಾಣಿಸಿದರೆ ಅವರಿಗೆ ವೈಯಕ್ತಿಕ ಗ್ಯಾರಂಟಿ ಇರುವುದಿಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯಂತೆ ಸೆಲೆಬ್ರಿಟಿಗೂ ಸಮಾನ ಹಕ್ಕುಗಳಿವೆ. ಶಾರುಖ್ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ ಎಂಬ ಕಾರಣಕ್ಕೆ ಎಲ್ಲರನ್ನೂ ನಿಯಂತ್ರಿಸಬಹುದು ಎಂದಲ್ಲ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತ್ತು.
ಏನಿದು ಅಲ್ಲು ಅರ್ಜುನ್ ಕೇಸ್?
ಡಿ. 4 ರಂದು ಪುಷ್ಪ 2 (Pushpa 2) ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒರ್ವ ಮಹಿಳೆ ನಿಧನ ಹೊಂದಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿತ್ತು.
ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ನೊಟೀಸಿಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಇಂದು ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನಾಂಪಲ್ಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಾಮೀನು ಮಂಜೂರು ಮಾಡುವಂತೆ ಕೋರಿ ಅಲ್ಲು ಅರ್ಜುನ್ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದರು.