ಹಾಸನ: ಬೇಲೂರಿನ ಚನ್ನಕೇಶವ ದೇವಾಲಯದ ಒಳಗಡೆ ನಡೆಯುತ್ತಿದ್ದ ಅಲ್ಲು ಅರ್ಜುನ್ ಅಭಿನಯದ ‘ಡಿಜೆ’ ಚಿತ್ರದ ಶೂಟಿಂಗ್ ರದ್ದಾಗಿದೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭಕ್ತರ ಆಕ್ರೋಶಕ್ಕೆ ಮಣಿದ ಪುರಾತತ್ವ ಇಲಾಖೆ ಚಿತ್ರೀಕರಣವನ್ನು ರದ್ದುಮಾಡಿ ಆದೇಶ ಪ್ರಕಟಿಸಿದೆ.
ವಿವಾದ ಏನು?
ಸಾಮಾನ್ಯ ಜನರಿಗೆ ಬೇಲೂರು ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆ ಒಪ್ಪಿದರೆ ಮಾತ್ರ ಅನುಮತಿ ನೀಡಬೇಕು.
Advertisement
ಕೇವಲ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ಚಿತ್ರತಂಡ, ದೇವಸ್ಥಾನದ ಒಳ ಆವರಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲದಿದ್ದರೂ ಸಹ ಹಲವು ಬದಲಾವಣೆಗಳನ್ನು ಮಾಡಿತ್ತು. ವಿಷ್ಣುವನ್ನು ಆರಾಧಿಸಲ್ಪಡುವ ದೇವಾಲಯದಲ್ಲಿ ಶಿವಲಿಂಗ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಇಲ್ಲಿ ಕಳೆದ ನಾಲ್ಕು ದಿನಗಳಿಂದ ತೆಲುಗಿನ ‘ಡಿಜೆ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.
Advertisement
ದೇವಸ್ಥಾನಕ್ಕೆ ಉಗ್ರರ ಬೆದರಿಕೆಯೂ ಇದ್ದು ಭದ್ರತೆಯೂ ಸಾಕಷ್ಟಿದೆ. ಜೊತೆಗೆ ಈ ದೇವಸ್ಥಾನ ವಿಶ್ವ ಪ್ರಸಿದ್ಧವಾಗಿದ್ದು ಪ್ರತಿದಿನ ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಬರುತ್ತಿದ್ದಾರೆ. ಆವರಣದಲ್ಲಿ ಚಿತ್ರೀಕರಣ ನಡೆಯುವುದರಿಂದ ಸಂಪೂರ್ಣ ದೇವಾಲಯವನ್ನು ಇವರಿಗೆ ಸುತ್ತು ಹಾಕುವುದು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ವಿದೇಶಿಯರು ಸಹ ಶೂಟಿಂಗ್ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
Advertisement
ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದ್ದರೂ ಸಹ ಯಾವುದೇ ನಿಬಂಧನೆಗಳನ್ನು ತಿಳಿಸಲಿಲ್ಲವೆ? ಅಥವಾ ಯಾರ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಸಾಮಾನ್ಯ ಜನರಿಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆದರೆ ಹೇಗೆ ಎಂದು ಜನ ಪುರಾತತ್ವ ಇಲಾಖೆಯನ್ನು ಪ್ರಶ್ನಿಸಿದ್ದರು. ಜನರ ವಿರೋಧ ತೀವ್ರವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಶುಕ್ರವಾರ ಬೆಳಗ್ಗೆಯಿಂದಲೇ ಸುದ್ದಿ ಪ್ರಸಾರ ಮಾಡಿತ್ತು. ಈಗ ಪುರಾತತ್ವ ಇಲಾಖೆ ಚಿತ್ರೀಕರಣಕ್ಕೆ ನೀಡಿದ ಆದೇಶವನ್ನು ರದ್ದು ಮಾಡಿ ಆದೇಶ ಪ್ರಕಟಿಸಿದೆ.
Advertisement