– ಹೆರಿಗೆ ಭತ್ಯೆಗಾಗಿ ಸುಮಾರು ರೂ.27 ಲಕ್ಷ ಪಡೆದಿರುವ ಆರೋಪ
– ಅನುಮತಿ ಪಡೆಯದೇ ಪ್ರಯಾಣಕ್ಕೆ ಹೆಚ್ಚುವರಿ ಕಾರ್ ಬಳಕೆ
ನವದೆಹಲಿ: ಕರ್ನಾಟಕ ಭವನದ (Karnataka Bhavan) ಹೆಚ್ಚುವರಿ ಆಯುಕ್ತೆ ಆಕೃತಿ ಬನ್ಸಲ್ (Akriti Bansal) ಐಷರಾಮಿ ಜೀವನ ನಡೆಸುತ್ತಿದ್ದಾರೆ, ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬೆಂಗಳೂರು ಮೂಲದ ಶ್ರೀನಿವಾಸ್ ಎಲ್ ಎನ್ನುವವರು ದೂರು ನೀಡಿದ್ದಾರೆ.
ಮೂರು ಪುಟಗಳ ದೂರು ಸಲ್ಲಿಸಿದ್ದು, ಆಕೃತಿ ಬನ್ಸಲ್ ಕರ್ನಾಟಕ ಭವನದಲ್ಲಿ ಹೇಗೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಿವರವಾಗಿ ದೂರು ನೀಡಿದ್ದಾರೆ. ಆಕೃತಿ ಬನ್ಸಲ್ ಹೆರಿಗೆ ಭತ್ಯೆಗಾಗಿ ಸುಮಾರು ರೂ.27 ಲಕ್ಷ ಕರ್ನಾಟಕ ಭವನದ ಅಕೌಂಟ್ಸ್ ವಿಭಾಗದಿಂದ ಪಡೆದಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ದೊಡ್ಡ ಪ್ರಮಾಣದ ಹಣವನ್ನು ಒಂದೇ ತಿಂಗಳಲ್ಲಿ ಪಡೆದುಕೊಂಡಿದ್ದಾರೆ
ಆಕೃತಿ ಬನ್ಸಾಲ್ ಅವರಿಗೆ ಕರ್ನಾಟಕ ಭವನದ ಸಮೀಪವೇ ಸರ್ಕಾರಿ ನಿವಾಸ ನೀಡಲಾಗಿದೆ ಈ ಸರ್ಕಾರಿ ಮನೆಯನ್ನು ಸಂಬಂಧಿಕರಿಗೆ ನೀಡಿ ಅವರು ದೂರದ ತಂದೆ ತಾಯಿ ಮನೆಗೆ ಪ್ರಯಾಣಿಸಲು ನಿತ್ಯ ಕರ್ನಾಟಕ ಭವನದ ಸರ್ಕಾರಿ ವಾಹನ ಬಳಕೆ ಮಾಡುತ್ತಿದ್ದಾರೆ. ಇವರನ್ನು ಕರೆತರಲು ಹಾಗೂ ಹೋಗಿ ಬಿಟ್ಟು ಬರಲು ನಿತ್ಯ ಸುಮಾರು 150 ರಿಂದ 160 ಕಿ.ಮೀಗಳು ಸಂಚರಿಸಬೇಕು. ಇದರಿಂದ ತಿಂಗಳಿಗೆ ಹೆಚ್ಚು ಕಡಿಮೆ 35,000/- ದಿಂದ 40,000/- ರೂ.ಗಳಷ್ಟು ಪೆಟ್ರೋಲ್ / ಡೀಸಲ್ ಖರ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೀಗೆ ವಾಹನ ಬಳಕೆಗೆ ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ, ವಾರಂತ್ಯದಲ್ಲಿ ಎರಡು ಕಾರಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡುತ್ತಿದ್ದಾರೆ ಇದಕ್ಕೂ ಯಾವುದೇ ಅನುಮತಿ ನೀಡಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳು ಬಳಕೆ ಮಾಡದಷ್ಟು ಕರ್ನಾಟಕ ಭವನದ ವಾಹನಗಳನ್ನು ಮನಸೋಇಚ್ಛೆ ಬಳಕೆ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ದೂರಿದ್ದಾರೆ.
ಇದನ್ನು ಪ್ರಶ್ನೆ ಮಾಡಬೇಕಿರುವ ಆಯುಕ್ತೆ ಇಂಕೋಂಗ್ಲ ಜಮೀರ್ ಮೌನವಾಗಿದ್ದಾರೆ, ಇಂಕೋಂಗ್ಲ ಜಮೀರ್ ತಿಂಗಳಿಗೊಮ್ಮೆ ಕರ್ನಾಟಕ ಭವನದಲ್ಲಿ ಐಎಎಸ್‌ಗಳ ಜೊತೆ ಪಾರ್ಟಿ ಮಾಡಿಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳಿಗೆ ಕನ್ನಡದ ಭಾಷೆ ಸಂಸ್ಕೃತಿಯ ಬಗ್ಗೆ ಗೌರವ ಇಲ್ಲ, ಭವನದ ಇತರೆ ಅಧಿಕಾರಗಳ ಬಗ್ಗೆಯೂ ಅಸಹನೆ ಹೊಂದಿದ್ದು ಈ ಹಿನ್ನಲೆ ಇಬ್ಬರು ಅಧಿಕಾರಿಗಳನ್ನು ಉತ್ತರ ಕರ್ನಾಟಕದ ಭಾಗಕ್ಕೆ ವರ್ಗಾವಣೆ ಮಾಡುವಂತೆ ಶಾಲೀನಿ ರಜನೀಶ್ ಅವರಿಗೆ ಮನವಿ ಮಾಡಿದ್ದಾರೆ.