ಕೆಲಸದ ಒತ್ತಡದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವವರು ರುಚಿಕರ ಆಹಾರ ಸವಿಯಬೇಕಾದ್ರೆ ಹೋಟೆಲನ್ನೇ ಅವಲಂಬಿಸಿರ್ತಾರೆ. ಇನ್ನೂ ಕೆಲವರು ಅಷ್ಟು ಟೈಂ ಯಾರ್ ಕೊಡ್ತಾರೆ ಅಂತ ಇಷ್ಟವಿದ್ದರೂ ನೆಚ್ಚಿನ ಸ್ಫೈಸಿ ಫುಡ್ ಮಾಡೋಕಾಗದೇ ಅರ್ಜೆಂಟ್‌ನಲ್ಲಿ ಆಗಿದ್ದನ್ನು ಮಾಡಿಕೊಳ್ತಾರೆ. ಮನೆಗಳಲ್ಲಿ ಚಿಕನ್, ಮಟನ್ ಪೆಪ್ಪರ್ ಫ್ರೈ ಮಾಡೋದು ಸಹಜ.. ಆದ್ರೆ ಬಂಗುಡೆ ಪೆಪ್ಪರ್ ಫ್ರೈ ಕೂಡ ಸುಲಭವಾಗಿ ಮಾಡಬಹುದು ಅನ್ನೋದಕ್ಕೆ ಒಂದಿಷ್ಟು ಟಿಪ್ಸ್ ಇಲ್ಲಿದೆ.
ಈ ಫಿಶ್ ಫ್ರೈ ಗರಿ ಗರಿಯಾಗಿರುತ್ತೆ ಮತ್ತು ರುಚಿಕರವಾಗಿಯೂ ಇರುತ್ತೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ. ಒಮ್ಮೆ ಇದನ್ನ ಸವಿದ್‌ರೆ ಮತ್ತೆ ಮತ್ತೆ ಸವಿಯಬೇಕು ಅಂತ ಅನ್ನಿಸುತ್ತೆ. ಇದನ್ನ ಹೇಗೆ ಮಾಡಬೇಕು ಅಂತ ನೋಡೋದಾದ್ರೆ…
ಬೇಕಾಗುವ ಸಾಮಗ್ರಿಗಳು:
* ಬಂಗುಡೆ ಮೀನು – ಅರ್ಧ ಕೆಜಿ
* ಕಾಳುಮೆಣಸಿನ ಪುಡಿ – 1 ಚಮಚ
* ಸೋಂಪು ಪುಡಿ – 1 ಚಮಚ
* ಕರಿಬೇವು- ಸ್ವಲ್ಪ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಅಡುಗೆ ಎಣ್ಣೆ- 2 ಚಮಚ
* ಗರಂ ಮಸಾಲೆ- ಅರ್ಧ ಚಮಚ
* ನಿಂಬೆರಸ – 1 ಚಮಚ
* ಅರಿಶಿಣ – ಸ್ವಲ್ಪ
* ಖಾರದಪುಡಿ – ಅರ್ಧ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ ಪೌಡರ್- ಅರ್ಧ ಚಮಚ
ಮಾಡುವ ವಿಧಾನ:
* ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
* ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು.
* ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು.
* ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.