ಎಷ್ಟೋ ಬಾರಿ ನಮ್ಮ ಕೈಲಿರುವ ಚಿನ್ನವನ್ನು ಬಿಟ್ಟು ತಗಡಿಗೆ ಸಿಂಗಾರ ಮಾಡುತ್ತಿರುತ್ತೇವೆ. ಅದರಂತೆಯೇ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ದೇಸಿ ಶ್ವಾನಗಳಿಗಿಂತ ವಿದೇಶಿ ಶ್ವಾನ ತಳಿಗಳಿಗೆ ನಾವು ಮಣೆ ಹಾಕಲಾಗುತ್ತಿತ್ತು. ಈಗ ಪ್ರಧಾನಿ ಮೋದಿಯವರ ಆಲೋಚನೆಯಿಂದಾಗಿ ನಮ್ಮ ದೇಶದ ಶ್ವಾನ ತಳಿಗಳಿಗೂ ಮನ್ನಣೆ ಸಿಕ್ಕಂತಗಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ್ ಯೋಜನೆ ಘೋಷಿಸಿದ ಬಳಿಕ ದೇಶದ ಕೈಗಾರಿಕೆ ಸೇರಿದಂತೆ, ಸೇನೆಯಲ್ಲಿ ಮಹತ್ತರ ಬದಲಾವಣೆಯ ಕ್ರಾಂತಿಯಾಗಿದೆ. ಅದರಂತೆ ಸೇನೆಯಲ್ಲಿ ದೇಸಿಯ ತಳಿಯ ನಾಯಿಗಳನ್ನೇ ಬಳಕೆ ಮಾಡಿಕೊಳ್ಳುವಂತೆ ಮೋದಿಯವರು ಸೂಚಿಸಿದ್ದರು. ಮೋದಿಯವರ ಈ ಆಲೋಚನೆಯಿಂದ ಶ್ವಾನದಳಕ್ಕೆ ದೇಸಿಯ ಬಲ ಬಂದಿದೆ. ದೇಸಿ ತಳಿಗಳಾದ ಕರ್ನಾಟಕದ ಬಾಗಲಕೋಟೆಯ ಮುಧೋಳ್ ಹಾಗೂ ಉತ್ತರ ಪ್ರದೇಶದ ರಾಂಪುರ ತಳಿಯ ಶ್ವಾನಗಳನ್ನು ಬಿಎಸ್‌ಎಫ್‌ಗೆ ಸೇರಿಸಲು ತೀರ್ಮಾನಿಸಲಾಗಿತ್ತು. ಈಗಾಗಲೇ ಈ ಶ್ವಾನ ತಂಡಗಳಿಗೆ ತರಬೇತಿ ನೀಡಲಾಗಿದೆ.
ಈ ವರ್ಷ ಗುಜರಾತ್‌ನಲ್ಲಿ ಏಕತಾ ಪ್ರತಿಮೆ ಬಳಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾರತೀಯ ಶ್ವಾನ ತಳಿಗಳು ಗಮನ ಸೆಳೆದಿದ್ದವು. ರಾಷ್ಟ್ರೀಯ ಏಕತಾ ದಿನದ ಮೆರವಣಿಗೆಯಲ್ಲಿ ಭಾರತೀಯ ತಳಿಗಳು ಬಿಎಸ್‌ಎಫ್ ಅನ್ನು ಪ್ರತಿನಿಧಿಸುತ್ತವೆ ಎಂದು ಮೋದಿಯವರು ಘೋಷಿಸಿದ್ದರು. ಈ ನಾಯಿಗಳು ಕಾರ್ಯಾಚರಣೆಯ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿರುವುದು ಮತ್ತೊಂದು ಹೆಮ್ಮೆ.
ದೇಸಿಯ ತಳಿಯ ನಾಯಿಗಳ ಕಸರತ್ತು ಮತ್ತು ಪ್ರದರ್ಶನ ಪ್ರಧಾನಿ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದೆ. ಅವರು 2018ರಲ್ಲಿ ಬಿಎಸ್‌ಎಫ್ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಅವರ ಸೂಚನೆಯಂತೆ ರಾಂಪುರ ಹೌಂಡ್ ಮತ್ತು ಮುಧೋಳ ಶ್ವಾನ ತಳಿಗಳಿಗೆ ತರಬೇತಿ ನೀಡಿ ಗಡಿ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಸೇರಿದಂತೆ ಕಾರ್ಯತಂತ್ರದ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.
ಮುಧೋಳ್ ಶ್ವಾನ
ಉದ್ದನೆಯ ಮೂತಿ, ಉದ್ದನೆಯ ಕಾಲುಗಳು, ಗಾಂಭೀರ್ಯದ ನಡೆ, ವೇಗದ ಊಟ, ಸಣಕಲು ದೇಹ, ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿರುವ ಮುಧೋಳ್ ಶ್ವಾನಗಳು ಒಂಟಿಯಾಗಿ ಇರಲು ಇಷ್ಟಪಡುತ್ತವೆ.
ಈ ಜಾತಿಯ ನಾಯಿಯ ವೈಶಿಷ್ಟ್ಯತೆ ಎಂದರೆ, ಓಡುವುದಕ್ಕಿಂತ ವೇಗವಾಗಿ ಜಿಗಿದು ಸಾಗುತ್ತವೆ. ಇವುಗಳ ದೇಹ ಬಲಿಷ್ಠ ಸ್ನಾಯುಗಳಿಂದ ಕೂಡಿದ್ದು, ಎದೆಯ ಮುಂಭಾಗ ಉದ್ದವಾಗಿರುತ್ತದೆ. ಹೊಟ್ಟೆಯ ಭಾಗ ತೆಳುವಾಗಿದ್ದು, ಬೆನ್ನಿನ ಭಾಗ ಅಗಲವಾಗಿರುತ್ತದೆ. ಮುಂಗಾಲುಗಳು ನೇರ ಹಾಗೂ ಉದ್ದವಾಗಿ ಸೊಂಟದ ಎಲಬುಗಳು ಅಗಲವಾಗಿ ಪಾದಗಳು ಉದ್ದವಾಗಿದ್ದು, ಗಟ್ಟಿಯಾದ ತಳಪಾದ ಹೊಂದಿರುತ್ತದೆ. ಬಾಲ ಮೂಲದಲ್ಲಿ ದಪ್ಪವಾಗಿ ಹಾಗೂ ತುದಿಯ ಕಡೆಗೆ ತೆಳುವಾಗಿ ಸ್ವಲ್ಪ ಬಾಗಿರುತ್ತದೆ.
ಈ ತಳಿಗಳು ತುಂಬಾ ಸಣಕಲು ದೇಹ ಹೊಂದಿದ್ದರೂ ಕೂಡ ಒಂದು ಹುಲಿಯನ್ನು ಕೂಡ ಸರಳವಾಗಿ ಎದುರಿಸಿ ಸೋಲಿಸುವ ಶಕ್ತಿಯನ್ನು ಹೊಂದಿವೆ. ಮುಧೋಳ ಶ್ವಾನಗಳ ಇನ್ನೊಂದು ವಿಶೇಷ ಗುಣವೆಂದರೆ, ಅವು ಯಾವುದೇ ರೀತಿಯ ವಾತಾವರಣಕ್ಕೂ ಕೂಡ ಹೊಂದಿಕೊಳ್ಳಬಲ್ಲವು. ವಿಪರೀತ ಚಳಿ ಹಾಗೂ ಬಿಸಿಲು ಎರಡನ್ನು ಕೂಡ ಸಹಿಸುವ ಶಕ್ತಿ ಅವುಗಳ ಮೈಗುಣಕ್ಕಿದೆ. ಇವು ಗಂಟೆಗೆ 45 ಕಿಲೋ ಮೀಟರ್ ವೇಗದಲ್ಲಿ ಓಡುವ ಶಕ್ತಿಯನ್ನು ಹೊಂದಿವೆ.
ದೇಶದ ಏಕೈಕ ಸಂಶೋಧನಾ ಕೇಂದ್ರ
ಮುಧೋಳ್ ಹೌಂಡ್ ತಳಿ ಶ್ವಾನಗಳ ಸಂರಕ್ಷಣೆಗಾಗಿ ಮುಧೋಳದ ತಿಮ್ಮಾಪುರದಲ್ಲಿ 2009ರಲ್ಲಿ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಇದು ದೇಶದಲ್ಲೇ ಏಕೈಕ ಸಂಸ್ಥೆಯಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿತ್ತು.
ಈ ಮುಧೋಳ್ ಶ್ವಾನಗಳಿಗೆ ಕ್ಯಾರವಾನ್, ಕಾವಾನಿ, ಪಶ್ಮಿ ಎಂದು ಸಹ ಕರೆಯಲಾಗುತ್ತದೆ. ಇವುಗಳ ಮಧ್ಯೆ ಮುಧೋಳ ನಾಯಿಗೆ ಈಗ ಮತ್ತೊಂದು ಗರಿ ಮೂಡಿದ್ದು, ಭಾರತೀಯ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ. ಈ ಮೂಲಕ ಭಾರತೀಯ ಸೇನೆಗೆ ಸೇರಿದ ಮೊದಲ ದೇಶಿಯ ತಳಿ ಎಂಬ ಕೀರ್ತಿಗೆ ಮುಧೋಳ್ ಬೇಟೆ ನಾಯಿಗಳು ಪಾತ್ರವಾಗಿವೆ.
ಭಾರತೀಯ ಅಂಚೆ ಇಲಾಖೆ 2005 ಜನವರಿ 9ರಂದು ಈ ತಳಿಯ ಅಂಚೆ ಚೀಟಿಯನ್ನು ಹೊರ ತಂದಿದೆ.
ಪಾಕ್ ಕುತಂತ್ರಕ್ಕೆ ಸೆಡ್ಡು!
ಮೊಟ್ಟ ಮೊದಲ ಬಾರಿಗೆ 2017ರಲ್ಲಿ ಭಾರತೀಯ ಸೇನೆಯಲ್ಲಿ ಗಡಿಯನ್ನು ಕಾಯಲು ಮುಧೋಳ್ ಶ್ವಾನಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಯಿತು. ಈ ಶ್ವಾನಗಳು ಈಗ ಭಾರತ ಮತ್ತು ಪಾಕ್ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವು ಸೂಕ್ಷ್ಮಾತಿ ಸೂಕ್ಷ್ಮ ವಸ್ತುಗಳನ್ನು ಕೇವಲ 40 ಸೆಕೆಂಡ್‌ಗಳಲ್ಲಿ ಪತ್ತೆ ಮಾಡುತ್ತವೆ. ಅಲ್ಲದೇ ಈ ಶ್ವಾನಗಳು ಒಮ್ಮೆ ತನ್ನ ಗುರಿಯನ್ನು ಬೆನ್ನಟ್ಟಿದರೆ ಅವುಗಳನ್ನು ಬಿಟ್ಟ ಉದಾಹರಣೆಯೇ ಇಲ್ಲ. ಇದು ಶತ್ರುಗಳ ಪಾಳಯದ ಎದೆ ನಡುಗಿಸುವಂತೆ ಮಾಡಿದೆ!
ಶಿವಾಜಿ ಮೆಚ್ಚಿದ್ದ ತಳಿ
ಮುಧೋಳ್ ಶ್ವಾನಗಳ ಚಾಣಾಕ್ಷ್ಯತನ ಅರಿತ ಮರಾಠಾ ದೊರೆ ಛತ್ರಪತಿ ಶಿವಾಜಿ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಾಕಿ ಅವುಗಳಿಗೆ ಸೇನೆಯ ತರಬೇತಿ ನೀಡಿ, ಸೇನೆಯಲ್ಲಿ ಇಟ್ಟುಕೊಂಡಿದ್ದ ಎಂದು ಇತಿಹಾಸಗಳು ಹೇಳುತ್ತದೆ. ಈ ಮೂಲಕ ಮೊದಲ ಬಾರಿಗೆ ಸೇನೆಯಲ್ಲಿ ಶಿವಾಜಿ ಮಹಾರಾಜ ಬಳಸಿದ್ದ ಎನ್ನಲಾಗುತ್ತದೆ.
ಮುಧೋಳ ಸಂಸ್ಥಾನದ ಕೊನೆಯ ದೊರೆ ರಾಜಾ ಭೈರವಸಿಂಹರಾವ್ ಮಾಲೋಜಿರಾವ್ ಘೋರ್ಪಡೆ. ಈ ಮುಧೋಳ ಶ್ವಾನಗಳ ಸಂತತಿಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು ಎಂದು ಇತಿಹಾಸಗಳು ಹೇಳುತ್ತದೆ. ಇದೇ ಮುಧೋಳ ಮಹಾರಾಜರು 1900ನೇ ಇಸವಿಯಲ್ಲಿ 5ನೇ ಕಿಂಗ್ ಜಾರ್ಜ್ಗೆ ಒಂದು ಜೋಡಿ ಮುಧೋಳ ಶ್ವಾನಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಅಂದಿನಿಂದ ಮುಧೋಳ ತಳಿಗಳ ಜನಪ್ರಿಯತೆ ಹೆಚ್ಚಾಗಿದೆ.
ಕಠಿಣ ತರಬೇತಿ
ಮುಧೋಳ ಮತ್ತು ರಾಂಪುರ ತಳಿಯ ಶ್ವಾನಗಳಿಗೆ ಹೆಲಿಕಾಪ್ಟರ್‌ನಿಂದ ಇಳಿಯುವ ಮತ್ತು ರಿವರ್ ರ್‍ಯಾಪ್ಟಿಂಗ್ ತರಬೇತಿಗಳನ್ನು ನೀಡಲಾಗುತ್ತಿದೆ. ಟೇಕಾನ್ಪುರ(ಮಧ್ಯಪ್ರದೇಶ)ದಲ್ಲಿರುವ ರಾಷ್ಟ್ರೀಯ ನಾಯಿಗಳ ತರಬೇತಿ ಕೇಂದ್ರದಲ್ಲಿ ಮೊದಲ ಬಾರಿಗೆ ಈ ನಾಯಿ ತಳಿಗಳಿಗೆ ಹೈರಿಸ್ಕ್ ಕಮಾಂಡೋ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 25ಕ್ಕೂ ಹೆಚ್ಚು ಮುಧೋಳ ಮತ್ತು ರಾಂಪುರ ಶ್ವಾನಗಳಿಗೆ ಮೊದಲ ಬಾರಿ ಕಠಿಣ ಕಮಾಂಡೋ ತರಬೇತಿ ನೀಡಲಾಗಿದೆ.
ಸಂಘರ್ಷಪೀಡಿತ ಪ್ರದೇಶದಲ್ಲಿ ಕಾಪ್ಟರ್‌ನಿಂದ ಕಮಾಂಡೋಗಳು ಹಗ್ಗದ ಸಹಾಯದಿಂದ ಜಾರಿಕೊಂಡು ಇಳಿಯುವಾಗ ಇವುಗಳನ್ನೂ ಇಳಿಸುವ ತರಬೇತಿ ನೀಡಲಾಗುತ್ತಿದೆ. ಕಮಾಂಡೋಗಳ ಬೆನ್ನಿಗೆ ಕಟ್ಟಿ ಈ ನಾಯಿಗಳನ್ನು ಇಳಿಸಲಾಗುತ್ತದೆ. ನಂತರ ತರಬೇತುದಾರ ಸೂಚನೆ ನೀಡುತ್ತಿದ್ದಂತೆ ಇವು ಕಾರ್ಯಾಚರಣೆಗೆ ಇಳಿಯುತ್ತವೆ. ಉಗ್ರರ ಧಮನ ಕಾರ್ಯಾಚರಣೆಗೆ ಅನುವಾಗುವಂತೆ ಈ ನಾಯಿಗಳಿಗೆ ಡೆಹರಾಡೂನ್‌ನಲ್ಲಿರುವ ಬಿಎಸ್‌ಎಫ್‌ನ ಕೇಂದ್ರದಲ್ಲಿ ತರಭೇತಿ ನೀಡಲಾಗುತ್ತಿದೆ.
ಮುಧೋಳ್ ಶ್ವಾನಕ್ಕೆ ಭಾರೀ ಬೇಡಿಕೆ
2017ಕ್ಕೂ ಮೊದಲು ಆರ್ಮಿ ಮತ್ತು ಪೊಲೀಸ್ ಇಲಾಖೆಯಲ್ಲಿ ಕೇವಲ ಲ್ಯಾಬರಾಡರ್, ಜರ್ಮನ್ ಶಫರ್ಡ್ ಹಾಗೂ ಡಾಬರಮಾನ್ನಂತಹ ತಳಿಗಳನ್ನು ಮಾತ್ರ ತರಬೇತಿ ನೀಡಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು. ಈಗ ಮುಧೋಳ ಶ್ವಾನಕ್ಕೆ ಸೇನೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಪೊಲೀಸ್ ಇಲಾಖೆಯಲ್ಲೂ ಅವುಗಳನ್ನು ಉಪಯೋಗಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸದ್ಯ ಮುಧೋಳ ಶ್ವಾನಗಳ ಬೆಲೆಯೂ ಕೂಡ ದುಬಾರಿಯಾಗಿವೆ. ಒಂದು ಮುಧೋಳ ನಾಯಿಮರಿ, 8 ಸಾವಿರ ರೂಪಾಯಿಂದ 20 ಸಾವಿರ ರೂಪಾಯಿವರೆಗೂ ಬೆಲೆಬಾಳುತ್ತವೆ!

