ಸಿಂಗಾಪುರ: ಮದ್ಯಪಾನ ಮಾಡಿ, ಲೈಫ್ ಜಾಕೆಟ್ ಧರಿಸದೇ ಈಜಲು ತೆರಳಿದ್ದೇ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ (Zubeen Garg) ಸಾವಿಗೆ ಕಾರಣ ಎಂದು ಸಿಂಗಾಪುರ ಕೋರ್ಟ್ (Singapore Court) ಹೇಳಿದೆ. ಈ ಮೂಲಕ ಹಲವು ತಿಂಗಳುಗಳಿಂದ ಚರ್ಚೆಯಲ್ಲಿದ್ದ ವದಂತಿಗಳಿಗೆ ಕೋರ್ಟ್ ಬ್ರೇಕ್ ಹಾಕಿದೆ.
ಸಿಂಗಾಪುರ ಪೊಲೀಸ್ ಕೋಸ್ಟ್ ಗಾರ್ಡ್ ನಡೆಸಿದ ತನಿಖೆಯ ಬಳಿಕ ಈ ಸಾವು ʻದುರದೃಷ್ಟಕರ ಮುಳುಗುವಿಕೆʼಎಂದು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಜುಬೀನ್ ಗಾರ್ಗ್ ಅವರು ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು. ಸೆ.19ರಂದು ತಮ್ಮ ನಿಗದಿತ ಪ್ರದರ್ಶನಕ್ಕೆ ಒಂದು ದಿನ ಮೊದಲು ಸಾವನ್ನಪ್ಪಿದ್ದರು. ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು ಕೇಸ್ – ಮ್ಯಾನೇಜರ್, ಸಿಂಗಾಪುರದ ಕಾರ್ಯಕ್ರಮ ಆಯೋಜಕ ಅರೆಸ್ಟ್
ಗಾರ್ಗ್ ಬೋಟ್‌ನಲ್ಲಿ ಲಾಜರಸ್ ದ್ವೀಪಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಅವರು ಮದ್ಯ ಸೇವಿಸಿದ್ದರು. ನಂತರ ಬೋಟ್‌ನಿಂದ ನೀರಿಗಿಳಿದು ಈಜುವಾಗ ಲೈಫ್ ಜಾಕೆಟ್ ಧರಿಸಿದ್ದರು. ನಂತರ ಅವರು ದ್ವೀಪದ ಕಡೆಗೆ ಈಜುವಾಗ ಲೈಫ್ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ಸಾಕ್ಷಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸ್ನೇಹಿತರು ದೋಣಿಗೆ ಹಿಂತಿರುಗಲು ಪದೇ ಪದೇ ವಿನಂತಿಸಿದ್ದರು. ದುರದೃಷ್ಟವಶಾತ್ ಅವರು ಸಾವನ್ನಪ್ಪಿದರು ಎಂದು ವರದಿಯಾಗಿದೆ.
ನ್ಯಾಯಾಲಯದಲ್ಲಿ ವಿಚಾರಣೆ ಸಮಯದಲ್ಲಿ ವಿಷಶಾಸ್ತ್ರ ವರದಿಯ ಪ್ರಕಾರ 100 ಮಿಲಿಗೆ 333 ಮಿಗ್ರಾಂ ರಕ್ತ ಆಲ್ಕೋಹಾಲ್ ಸಾಂದ್ರತೆಯನ್ನು ಬಹಿರಂಗಪಡಿಸಿದೆ. ಇದು ಈಜಲು ತೆರಳುವಾಗ ಆಲ್ಕೋಹಾಲ್ ಸೇವನೆಯನ್ನು ಸೂಚಿಸುತ್ತದೆ. ಈ ಮೂಲಕ ಅವರ ಸಾವಿನ ಹಿಂದಿನ ಪಿತೂರಿ ಅನುಮಾನವನ್ನು ನ್ಯಾಯಾಲಯ ತಳ್ಳಿ ಹಾಕಿದೆ.
ಗಾಯಕನ ಸಾವಿನ ಸಂಬಂಧ ಅಸ್ಸಾಂನಲ್ಲಿ ವಿಶೇಷ ತನಿಖಾ ತಂಡ ಕಾರ್ಯಕ್ರಮದ ಆಯೋಜಕರು ಮತ್ತು ಗಾಯಕನ ಸಹಚರರು ಸೇರಿದಂತೆ ಹಲವಾರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಇನ್ನೂ ಗಾರ್ಗ್ ಅವರ ಸಾವು ಅಸ್ಸಾಂನಾದ್ಯಂತ (Assam) ಅಭಿಮಾನಿಗಳಲ್ಲಿ ದುಃಖವನ್ನು ಉಂಟುಮಾಡಿತ್ತು. ಅವರ ಮೃತ ದೇಹವನ್ನು ಗುವಾಹಟಿಗೆ ಮರಳಿ ತಂದ ನಂತರ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದ್ದರು. ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಅಂತಿಮ ಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆ

