-ಊರಲ್ಲಿ ಮದ್ಯಪಾನ ಮಾಡಿದ್ರೆ ಬೀಳುತ್ತೆ ದಂಡ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯಪಾನವನ್ನು ಮಹಿಳೆಯರು ನಿಷೇಧಿಸಿದ್ದಾರೆ. ಒಂದು ವೇಳೆ ಪಂಚಾಯ್ತಿ ಆದೇಶ ಮೀರಿ ಊರಲ್ಲಿ ಮದ್ಯಪಾನ ಮಾಡಿದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹೌದು. ಕುಪ್ಪೂರು ಗ್ರಾಮದಲ್ಲಿ ಪುರುಷರಿಗೆ ಸೆಡ್ಡು ಹೊಡೆದು ಮಹಿಳೆಯರೇ ಪಂಚಾಯ್ತಿ ಕಟ್ಟೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಗಂಡಂದಿರ ಮದ್ಯಪಾನ ಚಟ ಬಿಡಿಸಲು ಮಹಿಳೆಯರೇ ಒಗ್ಗಟ್ಟಾಗಿ ಹೋರಾಟಕ್ಕಿಳಿದು, ಗ್ರಾಮದಲ್ಲಿ ಮದ್ಯವನ್ನು ನಿಷೇಧಿಸಿದ್ದಾರೆ. ಗ್ರಾಮದಲ್ಲಿ ಪಂಚಾಯ್ತಿ ನಡೆಸಿ ಊರಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಈ ತೀರ್ಮಾನಕ್ಕೆ ಗ್ರಾಮದ ಪುರುಷರು ವಿರೋಧ ಮಾಡದೇ ಒಪ್ಪಿಕೊಂಡಿದ್ದಾರೆ.
Advertisement
Advertisement
ಮದ್ಯ ನಿಷೇಧ ಮಾಡಿದ ಬಳಿಕ ಹಗಲು, ರಾತ್ರಿ ಗ್ರಾಮ ಮೂಲೆ ಮೂಲೆ ಸುತ್ತಿ ಮಹಿಳೆಯರೇ ಅಕ್ರಮ ಮದ್ಯ ಮಾರಾಟ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಮದ ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಮನೆಗೆ ನುಗ್ಗಿ ಅಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು, ನಡುರಸ್ತೆಯಲ್ಲಿ ಮದ್ಯದ ಪಾಕೆಟ್‍ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಹೀಗಾಗಿ ಮದ್ಯ ನಿಷೇಧ ವಿಚಾರದಲ್ಲಿ ಮಹಿಳೆಯರ ಒಗ್ಗಟ್ಟಿಗೆ ಗ್ರಾಮದ ಪುರುಷರು ಬೆಸ್ತುಬಿದ್ದಿದ್ದಾರೆ.