ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ‘ಮಿಷನ್ ಮಂಗಲ್’ ಚಿತ್ರದ ನಿರ್ದೇಶಕನ ವೈದ್ಯಕೀಯ ಖರ್ಚುಗಳನ್ನು ಭರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶನಿವಾರ ಮುಂಬೈನಲ್ಲಿ ನಿರ್ದೇಶಕ ಜಗನ್ ಶಕ್ತಿ ತಮ್ಮ ಸ್ನೇಹಿತರ ಜೊತೆ ಗೆಟ್ ಟು ಗೆದರ್‍ನಲ್ಲಿ ಭಾಗವಹಿಸಿದ್ದರು. ಈ ವೇಳೆ ಜಗನ್ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಮುಂಬೈನ ಕೊಕಿಲ್‍ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಗನ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸೋಮವಾರ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ನಿರ್ದೇಶಕ ಜಗನ್ ಚೇತರಿಸಿಕೊಳ್ಳುತ್ತಿದ್ದಾರೆ.
ಜಗನ್ ಅವರು ಕುಸಿದು ಬಿದ್ದಾಗ ಸ್ವತಃ ಅಕ್ಷಯ್ ಕುಮರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವರದಿಯಾಗಿದೆ. ಸದ್ಯ ಜಗನ್ ಅವರು ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಷಯ್ ಅವರು ಆಸ್ಪತ್ರೆಯ ಖರ್ಚು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಜಗನ್ ಅವರ ಕುಟುಂಬಸ್ಥರ ಜೊತೆ ನಿಂತು ಅವರಿಗೆ ಧೈರ್ಯ ಕೂಡ ಹೇಳಿದ್ದಾರೆ. ಅಕ್ಷಯ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಿಷನ್ ಮಂಗಲ್ ಜಗನ್ ಶಕ್ತಿ ನಿರ್ದೇಶನದ ಮೊದಲ ಚಿತ್ರ. ಈ ಸಿನಿಮಾ ಚಂದ್ರಯಾನ ಕತೆಯಾಗಿದ್ದು, ಕಳೆದ ವರ್ಷ ಬಿಡುಗಡೆಯಾಗಿತ್ತು. ಇದರಲ್ಲಿ ನಟ ಅಕ್ಷಯ್ ಕುಮಾರ್, ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.