ನವದೆಹಲಿ: ಇತ್ತೀಚೆಗೆ ಸಾಧಕರ ಜೀವನಾಧಾರಿತ ಚಲನಚಿತ್ರಗಳು ಸಾಲು ಸಾಲಾಗಿ ಬರುತ್ತಿರುವ ಬೆನ್ನಲ್ಲೇ ಪ್ರೇಕ್ಷಕ ಪ್ರಭುಗಳೂ ಸಹ ಅಷ್ಟೇ ಕುತೂಹಲದಿಂದ ಇಂತಹ ಚಿತ್ರಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಿಲ್ಕಾ ಸಿಂಗ್ ಜೀವನಾಧಾರಿತ ಚಿತ್ರ ಭಾಗ್ ಮಿಲ್ಕಾ ಭಾಗ್ ಹಾಗೂ ಧೋನಿ ಜೀವನಾಧಾರಿತ ಚಲನಚಿತ್ರದಿಂದ ಈ ವರೆಗೆ ವಿವಿಧ ಸಾಧಕರ ಚಿತ್ರಗಳು ಹಿಟ್ ಲಿಸ್ಟ್ ನಲ್ಲಿವೆ.
ಇದೀಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೀವನಾಧಾರಿತ ಚಿತ್ರಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಈ ಚಿತ್ರಕ್ಕೆ ತಾರಾಗಣದ ಆಯ್ಕೆ ಪ್ರಕ್ರಿಯೆಯೂ ಅಷ್ಟೇ ಚುರುಕಾಗಿದ್ದು, ಬಹು ಬೇಡಿಕೆ ನಟ ಅಕ್ಷಯ್ ಕುಮಾರ್ ಅವರೇ ಅಜಿತ್ ದೋವಲ್ ಆಗಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
https://www.instagram.com/p/B0fTbh3nT9O/?utm_source=ig_embed
ಇತ್ತೀಚೆಗೆ ಅಕ್ಷಯ್ ಕುಮಾರ್ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕಿದ್ದನ್ನು ನೋಡಿದರೆ ಮುಖ್ಯವಾಹಿನಿ ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದಾರೆ ಎಂದೇ ಹೇಳಬಹುದು. ಇದೀಗ ಅಕ್ಷಯ್ ಕುಮಾರ್ ಅವರು ಸುಮಾರು ಏಳು ಚಿತ್ರಗಳಿಗೆ ಸಹಿ ಹಾಕಿದ್ದು, ಈ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಿಷನ್ ಮಂಗಳ್, ಹೌಸ್‍ಫುಲ್ 4, ಗುಡ್ ನ್ಯೂಸ್, ಸೂರ್ಯವಂಶಿ, ಲಕ್ಷ್ಮಿ ಬಾಂಬ್, ಬಚ್ಚನ್ ಪಾಂಡೆ ಮತ್ತು ಇಕ್ಕಾ ಚಿತ್ರಗಳು ಅಕ್ಷಯ್ ಕುಮಾರ್ ಅವರ ಲಿಸ್ಟ್‍ನಲ್ಲಿವೆ. ಇದೀಗ ಅಕ್ಷಯ್ ಕುಮಾರ್ ಅವರಿಗಾಗಿ ಮತ್ತೊಂದು ಚಿತ್ರವನ್ನು ರೂಪಿಸಲಾಗಿದ್ದು, ಅದೇ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೀವನಾಧಾರಿತ ಚಿತ್ರವಾಗಿದೆ. ಆದರೆ, ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಅಜಿತ್ ದೋವಲ್ ಅವರ ವೃತ್ತಿ ಜೀವನದ ಮುಖ್ಯಾಂಶಗಳನ್ನು ಆಧರಿಸಿದ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಹಾಗೂ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ನೀರಜ್ ಪಾಂಡೆ ಮತ್ತೆ ಒಂದಾಗಲಿದ್ದಾರೆ. ಈ ಹಿಂದೆ ಇವರಿಬ್ಬರು ಬೇಬಿ ಮತ್ತು ಸ್ಪೆಷಲ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಅಜಿತ್ ದೋವಲ್ ಜೀವನಾಧಾರಿತ ಚಿತ್ರ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿದ್ದು, ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನೂ ಕೆಲ ಸಮಯವನ್ನು ತೆಗೆದುಕೊಳ್ಳಲಿದೆ. ಏಕೆಂದರೆ ಅಕ್ಷಯ್ ಕುಮಾರ್ ಅವರ ಕಾಲ್ ಲಿಸ್ಟ್‍ನಲ್ಲಿ ಈಗಾಗಲೇ ಸಾಲು ಸಾಲು ಚಿತ್ರಗಳಿದ್ದು, ಇವೆಲ್ಲ ಪೂರ್ಣಗೊಳ್ಳಬೇಕಿದೆ. ಅಲ್ಲದೆ, ನೀರಜ್ ಪಾಂಡೆ ಸಹ ಅಜಯ್ ದೇವಗನ್ ಅವರ ಚಾಣಕ್ಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅಜಿತ್ ದೋವಲ್ ಜೀವನಾಧಾರಿತ ಸಿನಿಮಾ ಸೆಟ್ಟೇರಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
ನೀರಜ್ ಅವರು ಕೆಲ ತಿಂಗಳಿಂದ ಅಜಯ್ ದೇವಗನ್ ಅವರ ಚಾಣಕ್ಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ಸಹ ಅವರ ಲಿಸ್ಟ್‍ನಲ್ಲಿರುವ ಚಿತ್ರಗಳನ್ನು ಪೂರೈಸಬೇಕಿದೆ. ಹೀಗಾಗಿ ಅಧೀಕೃತವಾಗಿ ಘೋಷಣೆ ಮಾಡುವವರೆಗೆ ಸ್ಕ್ರಿಪ್ಟ್ ಕುರಿತು ಯಾವುದೇ ಗುಟ್ಟನ್ನು ಬಿಟ್ಟುಕೊಡದಿರಲು ಚಿತ್ರ ತಂಡ ನಿಶ್ಚಯಿಸಿದೆ.
https://www.instagram.com/tv/B0VhqAoHKag/?utm_source=ig_embed
ಪ್ರಸ್ತುತ ಅಕ್ಷಯ್ ಕುಮಾರ್ ಮಿಷನ್ ಮಂಗಳ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದು ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ. ಇದನ್ನು ಜಗನ್ ಶಕ್ತಿ ನಿರ್ದೇಶಿಸಿದ್ದು, ಇದು 2013ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪ್ರಾರಂಭಿಸಿದ ಮೊದಲ ಅಂತರ್ ಗ್ರಹ ಕಾರ್ಯಾಚರಣೆಯಾದ ಮಾರ್ಸ್ ಆರ್ಬಿಟರ್ ಮಿಷನ್(ಎಂಓಎಂ)ಗೆ ಕೊಡುಗೆ ನೀಡಿದ ವಿಜ್ಞಾನಿಗಳ ಜೀವನಾಧಾರಿತ ಚಲನಚಿತ್ರವಾಗಿದೆ. ಮಿಷನ್ ಮಂಗಳ್ ಸಹ ಬಹುತಾರಾಗಣದ ಚಿತ್ರವಾಗಿದ್ದು, ವಿದ್ಯಾಬಾಲನ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ಕೀರ್ತಿ ಕುಲ್ಹಾರಿ, ನಿತ್ಯಾ ಮೆನನ್ ಹಾಗೂ ಶರ್ಮನ್ ಜೋಶಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.