ಹಾಸನ: ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷಾ ಗರಂ ಆಗಿದ್ದಾರೆ.
ಇಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸ್ವತಃ, ಪ್ರತಿ ಅಧಿಕಾರಿ ಕಚೇರಿಗೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸಮಯ 10 ಗಂಟೆಯಾದರೂ ಕೆಲ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕಚೇರಿಗಳಲ್ಲಿ ಯಾವೊಬ್ಬ ಅಧಿಕಾರಿ ಇಲ್ಲದಿರುವುದನ್ನು ನೋಡಿ ಆಕ್ರೋಶಕೊಂಡ ಡಿಸಿ ಅಕ್ರಂ ಪಾಷಾ ಅವರು ಕೋಪಗೊಂಡಿದ್ದಾರೆ.
ನಾಳೆಯಿಂದ 10 ಗಂಟೆ ಒಳಗೆ ಅಧಿಕಾರಿಗಳು ಕಚೇರಿಗೆ ಆಗಮಿಸಬೇಕೆಂದು ಡಿಸಿ ಅಕ್ರಂ ಪಾಷಾ ವಾರ್ನಿಂಗ್ ಕೊಟ್ಟಿದ್ದಾರೆ. ಜೊತೆಗೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಇದೇ ವೇಳೆ ಕಚೇರಿ ಸ್ವಚ್ಛತೆ ಬಗ್ಗೆಯೂ ಡಿಸಿ ಪರಿಶೀಲನೆ ನಡೆಸಿದ್ದಾರೆ.
ಹಾಸನ ಡಿಸಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ವರ್ಗಾವಣೆಯಾದ ಬಳಿಕ ಎಡರನೇ ಬಾರಿಗೆ ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷಾ ನೇಮಕವಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಂ ಪಾಷಾ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆಗ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನೇಮಕ ಮಾಡಿತ್ತು.
ಅಕ್ರಂಪಾಷಾ ಅವರು ಫೆಬ್ರವರಿ 22 ರಂದು ಹಾಸನಕ್ಕೆ ವರ್ಗಗೊಂಡು ಆಗಮಿಸಿದ್ದರು. ಆದರೆ ಒಂದು ತಿಂಗಳ ಅವಧಿಯಲ್ಲೇ ಪಾಷಾರನ್ನು ಕೂಡ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಹಾಸನ ಜಿಲ್ಲಾಧಿಕಾರಿಯಾಗಿ ಅಕ್ರಂಪಾಷಾ ಬಂದಿದ್ದಾರೆ.