ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಇಂದು ದೆಹಲಿಯ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ತಂದೆಯ ಫಾರ್ಮುಲಾ ಬಳಸಿರುವ ಐಶ್ವರ್ಯ ಶಿವಕುಮಾರ್ ಖಡಕ್ ಉತ್ತರ ನೀಡಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರುವ ಐಶ್ವರ್ಯ, ನನಗೆ ಗೊತ್ತಿರುವ ಮತ್ತು ನೆನಪಿನಲ್ಲಿರುವ ವಿಷಯಗಳನ್ನು ಮಾತ್ರ ಹೇಳುತ್ತೇನೆ. ನನಗೆ ತಿಳಿಯದಿರದ ಪ್ರಶ್ನೆಗಳಿಗೆ ದಾಖಲೆ ನೋಡಿ ಮತ್ತು ಚಾರ್ಟೆಡ್ ಅಕೌಂಟಂಟ್ ಬಳಿ ಕೇಳಿ ಹೇಳುತ್ತೇನೆ. ನನಗೆ ಗೊತ್ತಿಲ್ಲದೇ ಯಾವ ವ್ಯವಹಾರಗಳು ನಡೆದಿಲ್ಲ. ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನನ್ನ ಎಲ್ಲ ವ್ಯವಹಾರಗಳಿಗೆ ತಂದೆಯ ಆರ್ಥಿಕ ನೆರವು ಇದೆ. ಎಲ್ಲ ವ್ಯವಹಾರಗಳನ್ನು ಘೋಷಿಸಿಕೊಂಡು ತೆರಿಗೆಯನ್ನು ಪಾವತಿಸಿದ್ದೇನೆ. ತಂದೆ ಜೊತೆ ನಾನು ವ್ಯವಹಾರಗಳನ್ನು ನಿರ್ವ ಹಿಸುತ್ತಿದ್ದೇನೆ ಎಂದು ಐಶ್ವರ್ಯ ದಿಟ್ಟ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ವಿಚಾರಣೆಗೆ ಹಾಜರಾದಾಗ ತಂದೆ ಶಿವಕುಮಾರ್ ಅವರನ್ನು ಇಡಿ ಕಚೇರಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಡಿಕೆಶಿ ಎಲ್ಲ ಪ್ರಶ್ನೆಗಳಿಗೂ ಧೈರ್ಯವಾಗಿ ಉತ್ತರಿಸುವಂತೆ ಪುತ್ರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.