ನವದೆಹಲಿ: ಬೆಂಗಳೂರಿನಿಂದ (Bengaluru) ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಶಂಕೆಯ ಹಿನ್ನೆಲೆಯಲ್ಲಿ, ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಭಾರಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ‘ಸಂಪೂರ್ಣ ತುರ್ತು ಪರಿಸ್ಥಿತಿ’ ಘೋಷಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ರಾತ್ರಿ ಸುಮಾರು 9:30 ರ ವೇಳೆಗೆ ಏರ್ ಇಂಡಿಯಾದ AI 2802 ವಿಮಾನವು ದೆಹಲಿ(Delhi) ತಲುಪುತ್ತಿದ್ದಂತೆ ಅದರ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಹಾಗೂ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಯಿತು. ತಕ್ಷಣವೇ ಪೈಲಟ್‌ಗಳು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ ಮಾಹಿತಿ ರವಾನಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರನ್‌ವೇಯ ಸುತ್ತ ಅಗ್ನಿಶಾಮಕ ವಾಹನ ಹಾಗೂ ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧವಾಗಿಡಲಾಗಿತ್ತು. ಬಳಿಕ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದ ರನ್‌ವೇ 29R ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಸದ್ಯ ವಿಮಾನವನ್ನು ರನ್‌ವೇಯಿಂದ ಸುರಕ್ಷಿತ ವಲಯಕ್ಕೆ ಎಳೆದುಕೊಂಡು ಹೋಗಲಾಗಿದ್ದು (Towed) ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನದಲ್ಲಿದ್ದ ಎಲ್ಲಾ 171 ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ವಿಮಾನ ರನ್ ವೇ 29R ನಲ್ಲಿ 40 ನಿಮಿಷಗಳ ಕಾಲ ನಿಂತಿತ್ತು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.
Air India confirms an incident involving Flight AI2802 operating from Bengaluru to Delhi on 21 May 2026.
During the aircraft’s final approach into Delhi, the cockpit crew received a fire indication from one of the engines. The indication was subsequently confirmed as true. The…
— Air India Newsroom (@AirIndia_News) May 21, 2026
ಘಟನೆಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಸಂಸ್ಥೆಯ ವಕ್ತಾರರು, “ಮೇ 21, 2026 ರಂದು ಬೆಂಗಳೂರಿನಿಂದ ದೆಹಲಿಗೆ ಕಾರ್ಯನಿರ್ವಹಿಸುತ್ತಿದ್ದ AI 2802 ವಿಮಾನಕ್ಕೆ ಸಂಬಂಧಿಸಿದ ಘಟನೆ ನಮ್ಮ ಗಮನಕ್ಕೆ ಬಂದಿದೆ. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ಅವಘಡ – ರನ್‌ವೇಗೆ ತಾಗಿದ ಏರ್ ಇಂಡಿಯಾ ವಿಮಾನದ ಹಿಂಭಾಗ
29R ರನ್‌ವೇಯಲ್ಲೇ ಯಾಕೆ?
’29’ ಎಂದರೆ ಈ ರನ್‌ವೇ ಅಂದಾಜು 290° ಕೋನದಲ್ಲಿ (ಪಶ್ಚಿಮ-ವಾಯುವ್ಯ ದಿಕ್ಸೂಚಿ ಮುಖವಾಗಿ) ನಿರ್ಮಾಣವಾಗಿದೆ ಎಂದರ್ಥ. ಕೊನೆಯ ಸೊನ್ನೆಯನ್ನು ಹೆಸರಿಸುವಾಗ ಕೈಬಿಡಲಾಗುತ್ತದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದೇ ದಿಕ್ಸೂಚಿಗೆ ಮುಖ ಮಾಡಿರುವ ಎರಡು ಸಮಾನಾಂತರ (Parallel) ರನ್‌ವೇಗಳಿವೆ. ವಿಮಾನವು ಇಳಿಯುವಾಗ ಪೈಲಟ್‌ಗೆ ಬಲಗಡೆ ಕಾಣಿಸುವ ರನ್‌ವೇಯನ್ನು 29R (29 Right) ಎಂದೂ, ಎಡಗಡೆ ಇರುವುದನ್ನು 29L (29 Left) ಎಂದೂ ಕರೆಯಲಾಗುತ್ತದೆ.
ಈ ರನ್‌ವೇಯು ಸುಮಾರು 4,430 ಮೀಟರ್ (4.43 ಕಿ.ಮೀ.) ಉದ್ದ ಹಾಗೂ 60 ಮೀಟರ್ ಅಗಲವನ್ನು ಹೊಂದಿದೆ. ಬ್ರೇಕ್ ವೈಫಲ್ಯ ಅಥವಾ ಎಂಜಿನ್ ದೋಷವಿದ್ದಾಗ ವಿಮಾನವನ್ನು ನಿಲ್ಲಿಸಲು ಹೆಚ್ಚು ದೂರದ ರನ್-ವೇ ಬೇಕಾಗುತ್ತದೆ. 29R ಇದಕ್ಕೆ ಅತ್ಯಂತ ಸುರಕ್ಷಿತ ಸ್ಥಳಾವಕಾಶ ನೀಡುತ್ತದೆ. ಈ ರನ್‌ವೇಯ ಸುತ್ತಮುತ್ತ ಅಗ್ನಿಶಾಮಕ ದಳ ಮತ್ತು ರಕ್ಷಣಾ ವಾಹನಗಳು ಕ್ಷಣಾರ್ಧದಲ್ಲಿ ತಲುಪಲು ಸೂಕ್ತವಾದ ಲಿಂಕ್ ರಸ್ತೆಗಳಿವೆ.

