ನವದೆಹಲಿ: ಮಾಜಿ ಸಂಸದೆ ರಮ್ಯಾ ಎಐಸಿಸಿ ಐಟಿ ಸೆಲ್ ನ ಮುಖ್ಯಸ್ಥೆಯಾದ ನಂತರ ಎಐಸಿಸಿ ಐಟಿ ಸೆಲ್ ಬಾರಿ ಸೌಂಡ್ ಮಾಡತೊಡಗಿತ್ತು. ರಾಜಕೀಯ ವಿರೋಧಿಗಳಿಗೆ ಟ್ವಿಟ್ಟರ್, ಫೇಸ್ ಬುಕ್ ನಲ್ಲೇ ಕೌಂಟರ್ ನೀಡಿ ರಮ್ಯಾ ಸಖತ್ ಸುದ್ದಿ ಆಗಿದ್ದರು.
ಐಟಿ ಸೆಲ್ ನ ಮುಖ್ಯಸ್ಥರಾದ ರಮ್ಯಾ ಕೇವಲ ಸೋಶಿಯಲ್ ಮಿಡಿಯಾಕ್ಕಷ್ಟೆ ಸೀಮಿತವಾಗಿಲ್ಲ. ಐಟಿ ಸೆಲ್ ಹೆಸರಿನಲ್ಲಿ ರಾಹುಲ್ ಗಾಂಧಿ ಕಚೇರಿಯಲ್ಲಿ ದುರುಪಯೋಗವಾಗುತ್ತಿದ್ದ ಕೋಟಿ ಕೋಟಿ ಹಣದ ಅವ್ಯವಹಾರಕ್ಕೂ ಬ್ರೇಕ್ ಹಾಕಿದ್ದಾರೆ. ದುಬಾರಿ ವೆಚ್ಚ ತಗಲುತ್ತಿದ್ದ ಐಟಿ ಸೆಲ್ ಈಗ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಆಗುತ್ತಿದೆ.
Advertisement
Advertisement
ರಮ್ಯಾರ ಈ ದಿಟ್ಟ ನಿರ್ಧಾರ ರಾಹುಲ್ ಗಾಂಧಿ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ರಮ್ಯಾ ವಿರುದ್ಧ ಕತ್ತಿ ಮಸೆಯುತ್ತಿರುವ ಎಐಸಿಸಿ ಕಚೇರಿಯ ಹಳೇ ಹುಲಿಗಳು ಕಳೆದ 4 ತಿಂಗಳಿನಲ್ಲಿ 3 ಬಾರಿ ರಮ್ಯಾ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ಸಣ್ಣಪುಟ್ಟ ವಿವಾದಗಳ ಹೊರತಾಗಿಯೂ ಎಐಸಿಸಿ ಐಟಿ ಸೆಲ್‍ಗೆ ಹೊಸ ರೂಪ ತಂದುಕೊಟ್ಟ ರಮ್ಯಾ ಕಾರ್ಯವೈಖರಿಗೆ ರಾಹುಲ್ ಗಾಂಧಿ ಫುಲ್ ಫಿದಾ ಆಗಿದ್ದಾರೆ ಎನ್ನಲಾಗಿದೆ.
Advertisement
Advertisement
ಏನೇ ದೂರು ಬಂದರೂ ರಾಹುಲ್ ಗಾಂಧಿ ರಮ್ಯಾರನ್ನ ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ಅಲ್ಲದೆ ರಮ್ಯಾ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದಾರೆ. ಇದರಿಂದ ಕಂಗಾಲಾದ ರಮ್ಯಾ ವಿರೋಧಿ ಬಣ ಎಲ್ಲವನ್ನು ನುಂಗಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಆಗಾಗ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ರಮ್ಯಾ ತಮಗೆ ನೀಡಿರುವ ಐಟಿ ಸೆಲ್‍ನ ಜವಾಬ್ದಾರಿ ನಿರ್ವಹಣೆಯಲ್ಲಿ ಮಾತ್ರ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ತಮ್ಮ ವಿರುದ್ಧ ಏನೇ ದೂರು ನೀಡಿದರೂ ತಲೆ ಕೆಡಿಸಿಕೊಳ್ಳದೆ ಐಟಿ ಸೆಲ್ ಮೂಲಕ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡತೊಡಗಿದ್ದಾರೆ. ಅಲ್ಲದೆ ಎಐಸಿಸಿ ಕಚೇರಿಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಿ ತಾವು ಆಡಿದ್ದೇ ಆಟ ಎಂಬಂತಿದ್ದ ಸಿಬ್ಬಂದಿಗಳು ಹಾಗೂ ಕಚೇರಿಯ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಇದರಿಂದ ಕಂಗಾಲಾದ ಎಐಸಿಸಿ ಕಚೇರಿಯ ಹಳೇ ತಲೆಗಳೆಲ್ಲಾ ‘ಏ ಮೇಡಮ್ ಕೋ ಸಲ್ಯೂಷನ್ ಕ್ಯಾ ಹೈ…?’ ಎಂದು ತಲೆ ಕೆರದುಕೊಳ್ಳತೊಡಗಿದ್ದಾರಂತೆ.
ಕರ್ನಾಟಕದ ಯಾವುದೇ ಕಾಂಗ್ರೆಸ್ ನಾಯಕರು ಸಿಕ್ಕರೂ ತಮ್ಮ ಅಸಹಾಯಕತೆಯನ್ನು ಎಐಸಿಸಿ ಸಿಬ್ಬಂದಿ ಹೊರಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ವಲಯದಲ್ಲಿ ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ದೆಹಲಿಯಲ್ಲಿ ರಮ್ಯಾ ಮೇಡಂ ಹವಾ ಜೋರಾಗಿದೆ.