LatestNational

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಮೈಕಲ್ ಪರ ವಾದ ಮಾಡಿದ ವಕೀಲ ಕಾಂಗ್ರೆಸ್‍ನಿಂದ ಔಟ್

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಮೈಕಲ್‍ನನ್ನು ಬುಧವಾರ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮೈಕಲ್ ಪರ ವಾದ ಮಾಡಿದ್ದ ಭಾರತೀಯ ಯುವ ಕಾಂಗ್ರೆಸ್ ಮುಖಂಡ ಆಲ್ಜೊ ಕೆ.ಜೋಸೆಫ್ ಅವರನ್ನು ಪಕ್ಷದಿಂದ ಕೈಬಿಡಲಾಗಿದೆ.

ವಕೀಲರಾಗಿರುವ ಆಲ್ಜೊ ಕೆ.ಜೋಸೆಫ್ ಭಾರತೀಯ ಯುವ ಕಾಂಗ್ರೆಸ್ಸಿನ ಯುವ ಇಲಾಖೆಯ ರಾಷ್ಟ್ರೀಯ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ನಿನ್ನೆ ಕೋರ್ಟ್ ನಲ್ಲಿ ಆರೋಪಿ ಮೈಕಲ್ ಪರ ವಾದ ಮಾಡಿದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಬ್ರಿಟನ್ ಮೂಲದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ ಹೆಲಿಕಾಪ್ಟರ್ ಖರೀದಿಯ ಹಗರಣ ಕಾಂಗ್ರೆಸ್ ಸುತ್ತಿಕೊಂಡಿದೆ. ಹೀಗಿರುವಾಗ ಮೈಕಲ್ ಪರ ವಾದಕ್ಕೆ ಕಾಂಗ್ರೆಸ್ ಸದಸ್ಯನೇ ಇಳಿದಿರುವುದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಪ್ರಕರಣದ ಕುರಿತು ವಾದ ಮಂಡಿಸುವ ಕುರಿತಾಗಿಯೂ ಜೋಸೆಫ್ ಪಕ್ಷದ ಮುಖಂಡರಿಂದ ಒಪ್ಪಿಗೆ ಪಡೆದಿಲ್ಲವೆಂದು ವರದಿಯಾಗಿದೆ. ಇದನ್ನು ಓದಿ: ಯುಪಿಎ ಸರ್ಕಾರದ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬಂಧನ: ಏನಿದು ಹಗರಣ?

ಜೋಸೆಫ್ ಅವರು ಪಕ್ಷ ಅಥವಾ ಕ್ರಿಶ್ಚಿಯನ್ ಪರವಾಗಿ ವಾದ ಮಾಡಿಲ್ಲ. ಪಕ್ಷಕ್ಕೆ ತಿಳಿಸದೇ ಪಡೆಯದೆ ವೈಯಕ್ತಿಕ ಸಾಮಥ್ರ್ಯದಿಂದ ವಾದ ಮಾಡಿದ್ದಾರೆ. ಇದನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಒಪ್ಪುವುದಿಲ್ಲ ಎಂದು ಐವೈಸಿ ವಕ್ತಾರ ಅಮ್ರಿಶ್ ರಾಜನ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ಮೈಕಲ್ ಪರ ವಾದ ಮಾಡಿದ ಜೋಸೆಫ್‍ನನ್ನು ಖಂಡಿಸಿ ಅನೇಕ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.

ಇದು ನನ್ನ ವೃತ್ತಿ. ಪಕ್ಷದ ಕೆಲಸವಲ್ಲ. ಹೀಗಾಗಿ ಮೈಕಲ್ ಪರ ವಾದ ಮಾಡಲು ಮುಂದಾಗಿರುವೆ. ದುಬೈನ ಸ್ನೇಹಿತ ಸಲಹೆಯಂತೆ ಪ್ರಕರಣವನ್ನು ಎತ್ತಿಕೊಂಡು ವಾದ ಮಾಡುತ್ತಿರುವೆ. ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುವೆ. ಇದಕ್ಕೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಆಲ್ಜೊ ಕೆ.ಜೋಸೆಫ್ ತಿಳಿಸಿದ್ದಾರೆ.

ಮೈಕಲ್ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಮೈಕಲ್‍ನನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ತನಿಖೆ ಹಾಗೂ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *