ತುಮಕೂರು: ಕಳೆದ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಎಂದು ಘೋಷಿಸಿತ್ತು. ಆದರೆ ಆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬ್ಯಾಂಕ್ ಕಡೆಯಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ಬರುತ್ತಿರುವುದು ಇನ್ನು ನಿಂತಿಲ್ಲ. ಸಾಲಮನ್ನಾ ಆಗಿ ಸಂಕಷ್ಟ ದೂರ ಆಯ್ತು ಎಂದುಕೊಂಡಿದ್ದ ರೈತರಿಗೆ ಬ್ಯಾಂಕ್ ನಿಂದ ಬರುತ್ತಿರುವ ನೋಟಿಸ್ ಮತ್ತೆ ನಿದ್ದೆ ಕೆಡಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ನೂರಾರು ರೈತರಿಗೆ ಸಾಲ ಮರುಪಾವತಿ ಮಾಡುವ ನೋಟಿಸ್ ಬಂದಿದೆ.
Advertisement
ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಜಾರಿಗೆ ತಂದಂತಹ ಸಾಲಮನ್ನಾ ಯೋಜನೆ ಕಣ್ಣೊರೆಸುವ ತಂತ್ರವಾಗಿ ಪರಿಣಮಿಸಿದೆ. ಆರಂಭದಲ್ಲಿ ಮೈತ್ರಿ ಸರ್ಕಾರ ಸಾಲಮನ್ನಾ ಎಂದು ಘೋಷಿಸಿತ್ತು. ಘೋಷಣೆ ಆದ ಒಂದು ವರ್ಷದ ಬಳಿಕ ನಾವು ನಿಮ್ಮ ಜೊತೆ ಇದ್ದೀವಿ. ಸಾಲಮನ್ನಾ ಮಾಡೇ ಮಾಡುತ್ತೇವೆ ಎಂದು ಸಾಂತ್ವನ ಪತ್ರ ಕಳುಹಿಸಿದ್ದರು. ಈ ನಡುವೆ ಮೈತ್ರಿ ಸರ್ಕಾರ ಉರುಳಿ ಹೋಯಿತು. ರೈತರ ಸಾಲಮನ್ನಾ ಮಾತ್ರ ಗಗನ ಕುಸುಮವಾಗಿದೆ.
Advertisement
ಹಿಂದೆಲ್ಲ ನಿಮ್ಮ ಕಟ್ ಬಾಕಿ ಕಟ್ಟಿ ಎಂದು ನೋಟಿಸ್ ಕಳುಹಿಸುತ್ತಿದ್ದ ಎಸ್‍ಬಿಐ ಬ್ಯಾಂಕಿನವರು ಈಗ ಹೊಸ ವರಸೆ ಆರಂಭಿಸಿದ್ದಾರೆ. ಸಾಲಮನ್ನಾ ಯೋಜನೆಗೆ ಒಳಪಡುವ ಎಲ್ಲಾ ರೈತರಿಂದ ಸೂಕ್ತ ದಾಖಲೆ ಪಡೆದುಕೊಂಡ ಬ್ಯಾಂಕ್ ಮತ್ತೆ ಮತ್ತೆ ರೈತರಿಗೆ ನೋಟಿಸ್ ನೀಡುತ್ತಿದೆ. ಕಟ್ ಬದಲು ಒನ್ ಟೈಮ್ ಸೆಟಲ್ ಮೆಂಟ್‍ಗೆ ಬನ್ನಿ ಎಂದು ನೋಟಿಸ್ ಬಂದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೂಳನಹಳ್ಳಿ ಪಾಳ್ಯ, ಅಡಗೂರು ಸೇರಿದಂತೆ ಹಲವು ಗ್ರಾಮದ ನೂರಾರು ರೈತರಿಗೆ ನೋಟಿಸ್ ಬಂದಿದೆ.
Advertisement
Advertisement
ಎರಡು ಲಕ್ಷದವರೆಗಿನ ಸಾಲಮನ್ನಾ ಮತ್ತು ನಿಯಮಿತವಾಗಿ ಕಂತು ಕಟ್ಟಿಕೊಂಡು ಬಂದವರಿಗೆ 25 ಸಾವಿರ ಇನ್ಸೆಂಟೀವ್ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಅದು ಯಾವುದೂ ಈಗ ಕಾರ್ಯರೂಪಕ್ಕೆ ಬಂದಿಲ್ಲ. ಬದಲಾಗಿ ತಮ್ಮ ಸಾಲಮನ್ನಾ ಆಗುತ್ತದೆ ಎಂದು ನಿಶ್ಚಿಂತೆಯಿಂದ ಇದ್ದ ರೈತರಿಗೆ ಬ್ಯಾಂಕ್ ನಿಂದ ಬರುವ ನೋಟಿಸ್ ಮತ್ತಷ್ಟು ಆತಂಕ ಮನೆ ಮಾಡಿದೆ. ಸರ್ಕಾರ ಕನ್ನೋರೆಸುವ ತಂತ್ರ ಬಿಟ್ಟು ರೈತರ ಸಂಕಷ್ಟ ಪರಿಹರಿಸುವ ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.