ಕೊಹ್ಲಿ ಜೊತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಹಿಟ್‌ಮ್ಯಾನ್‌ ವಿದಾಯ!

Public TV
1 Min Read
rohit and virat kohli

ನವದೆಹಲಿ: ಸುದೀರ್ಘ 17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶನಿವಾರ T20I ನಿವೃತ್ತಿ ಘೋಷಿಸಿದ್ದಾರೆ.

ಐತಿಹಾಸಿಕ ವಿಜಯದ ನಂತರ ಕೊಹ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದರು. ಭಾರತದ ವಿಜಯೋತ್ಸವದ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೋಹಿತ್, ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಭಾರತ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುವುದಾಗಿ ಖಚಿತಪಡಿಸಿದರು. ಟಿ20 ವಿಶ್ವಕಪ್‌ ಟ್ರೋಫಿಯನ್ನು ಭಾರತದ ಮಡಿಲಿಗಿಟ್ಟು ಇಬ್ಬರೂ ಕ್ರಿಕೆಟಿಗರು ವಿದಾಯ ಹೇಳಿದ್ದಾರೆ.

virat kohli 1 1

ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಪ್ರಶಸ್ತಿ ಗೆಲುವನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ ಎಂದು ರೋಹಿತ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್‌ ಶರ್ಮಾ ಒಟ್ಟು 159 ಪಂದ್ಯಗಳನ್ನಾಡಿದ್ದು, 4,231 ರನ್‌ ಗಳಿಸಿದ್ದಾರೆ. ಟಿ20 ಯಲ್ಲಿ 32 ಅರ್ಧಶತಕ ಮತ್ತು 5 ಶತಕ ಸಿಡಿಸಿ ಮಿಂಚಿದ್ದಾರೆ. ವಿರಾಟ್‌ ಕೊಹ್ಲಿ 125 ಪಂದ್ಯಗಳನ್ನಾಡಿದ್ದು, ಒಟ್ಟು 4,188 ರನ್‌ ಗಳಿಸಿದ್ದಾರೆ. ಕೊಹ್ಲಿ 38 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ನೀಡಿದ್ದ 177 ರನ್‌ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿತ್ತು. ಕೊನೆ ಘಳಿಗೆಯಲ್ಲಿ 30 ಬಾಲ್‌ಗಳಿಗೆ 30 ರನ್‌ ಬೇಕು ಎಂದಿದ್ದಾಗ ಭಾರತಕ್ಕೆ ಟ್ರೋಫಿ ಕೈ ತಪ್ಪಿತು ಎಂದೇ ಭಾವಿಸಲಾಗಿತ್ತು. ಈ ಹಂತದಲ್ಲಿ ನಡೆದ ಮ್ಯಾಜಿಕ್‌ ಅಸಾಧಾರಣ. ಸಂದಿಗ್ಧ ಸನ್ನಿವೇಶದಲ್ಲಿ ಜಸ್ಪ್ರಿತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಅರ್ಷದೀಪ್‌ ಸಿಂಗ್‌ ಬೌಲಿಂಗ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಕೊನೆ ಓವರ್‌ನಲ್ಲಿ ಪಾಂಡ್ಯ ಮಿಂಚಿದರು. ಈ ನಡುವೆ ಸೂರ್ಯಕುಮಾರ್‌ ಯಾದವ್‌ ಹಿಡಿದ ಕ್ಯಾಚ್‌ ಗಮನ ಸೆಳೆಯಿತು. ಕೊನೆಯದಾಗಿ ಭಾರತ 7 ರನ್‌ಗಳ ರೋಚಕ ಜಯ ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು.

Share This Article