ಉನ್ನಾವೋ ಪ್ರಕರಣದ ಬಳಿಕ ಮತ್ತೊಬ್ಬ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರದ ಆರೋಪ

Public TV
3 Min Read
BJP 2

ಲಕ್ನೋ: ಉನ್ನಾವೋ ಅತ್ಯಾಚಾರ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಉನ್ನಾವೋ ಪ್ರಕರಣ ಮಾಸುವ ಮುನ್ನವೇ ಮತ್ತೋರ್ವ ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಕೇಳಿ ಬಂದಿದೆ.

ಉತ್ತರ ಪ್ರದೇಶದ ಬಿಸೌಲಿ ಕ್ಷೇತ್ರದ ಕುಶಾಗ್ರ ಸಾಗರ್ ವಿರುದ್ಧ ಅತ್ಯಾಚಾರದ ಆರೋಪವೊಂದು ಕೇಳಿ ಬಂದಿದೆ. ಈ ಸಂಬಂಧ ಸಂತ್ರಸ್ತೆ ಮಂಗಳವಾರ ಬರೌಲಿ ಎಸ್.ಎಸ್.ಪಿ ಮುಂದೆ ದೂರು ದಾಖಲಿಸಿದ್ದಾರೆ. ಐದು ವರ್ಷಗಳ ಹಿಂದೆ ಯುವತಿಯ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರ ನಡೆದ ವೇಳೆ ಯುವತಿ ಅಪ್ರಾಪ್ತಳಾಗಿದ್ದರಿಂದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನವೂ ನಡೆದಿತ್ತು. ಐದು ವರ್ಷದ ಹಿಂದೆ ಕುಶಾಗ್ರ ಇನ್ನೂ ಶಾಸಕರಾಗಿರಲಿಲ್ಲ.

ಅತ್ಯಾಚಾರದ ಬಳಿಕ ಯುವತಿ ತಾಯಿ ಕುಶಾಗ್ರರ ತಂದೆ ಮಾಜಿ ಶಾಸಕ ಯೋಗೇಂದ್ರ ಸಾಗರ್ ಎದುರು ಅಳಲು ತೋಡಿಕೊಂಡಿದ್ರು. ಆ ವೇಳೆ ಯೋಗೇಂದ್ರ ಸಾಗರ್, ನಿಮ್ಮ ಮಗಳ ಇನ್ನು ಅಪ್ರಾಪ್ತೆಯಾಗಿದ್ದು, ವಯಸ್ಕಳಾದ ಮೇಲೆ ನನ್ನ ಮಗನೊಂದಿಗೆ ಮದುವೆ ಮಾಡಿಸುತ್ತೇನೆ ಅಂತಾ ಭರವಸೆ ನೀಡಿದ್ರು. ತಂದೆಯ ಭರವಸೆಯ ಬಳಿಕ ಕುಶಾಗ್ರ ನಿರಂತರವಾಗಿ ಐದು ವರ್ಷ ಸಂತ್ರಸ್ತೆಯನ್ನ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

kushagra sagar

2012ರಲ್ಲಿ ಮೊದಲ ಬಾರಿಗೆ ಅತ್ಯಾಚಾರ: ಬಾರದಾರಿಯ ನಿವಾಸಿ ಮಹಿಳೆ ಮಾಜಿ ಶಾಸಕ ಯೋಗೇಂದ್ರ ಸಾಗರ್ ಒಡೆತನದ ಗ್ರೀನ್ ಪಾರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ರು. ಯೋಗೇಂದ್ರ ಸಾಗರ್ ಹಲವು ಬಾರಿ ತಮ್ಮ ಮಗನೊಂದಿಗೆ ಪಾರ್ಕ್ ಗೆ ಆಗಮಿಸುತ್ತಿದ್ರು. 2012ರಲ್ಲಿ ಮೊದಲ ಬಾರಿಗೆ ಕುಶಾಗ್ರ ಕೆಲಸದಾಕೆಯ ಮಗಳ ಮೇಲೆ ಅತ್ಯಾಚಾರ ಎಸೆಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ರಂತೆ. ನಮ್ಮಿಬ್ಬರ ಸಂಬಂಧ ಹೀಗೆ ಇರಲಿ ಮುಂದೆ ತಾನು ನಿನ್ನನ್ನು ಮದುವೆ ಆಗುವುದಾಗಿ ಹೇಳಿ ಯುವತಿಯನ್ನು ಬೇರೆಯೊಂದು ಮನೆಯಲ್ಲಿ ಇರಿಸಲಾಗಿತ್ತು. 2014ರಲ್ಲಿ ನಡೆದ ಚುನಾವಣೆಯಲ್ಲಿ ಕುಶಾಗ್ರ ಶಾಸಕರಾಗಿ ಆಯ್ಕೆಯಾದ್ರು.

ಸಂತ್ರಸ್ತೆ 2014ರಲ್ಲಿ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು. ಈ ಸಂಬಂಧ ಜುಲೈ 15, 2014 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಎಸ್‍ಎಸ್‍ಪಿ ಮುಂದೆ ದೂರು ದಾಖಲಿಸಿದ್ರು. ದೂರು ದಾಖಲಾದ ಬಳಿಕ ಯುವತಿ ಕಡೆಯಿಂದ ಮುಚ್ಚಳಿಕೆ ಬರೆಸಿಕೊಂಡು ಶಾಸಕರ ಕುಟುಂಬದಿಂದ 10 ಲಕ್ಷ ರೂ. ನೀಡಿ ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು.

626960 rape dna image

ಪ್ರಕರಣಕ್ಕೆ ಮರು ಜೀವ ನೀಡಿದ್ರಾ..?: 2018 ಏಪ್ರಿಲ್ 4ರಂದು ಶಾಸಕ ಕುಶಾಗ್ರ ಸಂತ್ರಸ್ತೆ ಮನೆಗೆ ನುಗ್ಗಿ ಮತ್ತೊಮ್ಮೆ ಬಲತ್ಕಾರ ಎಸೆಗಿದರಂತೆ. ಯುವತಿಯೊಂದಿಗೆ ಶಾಸಕ ಕುಶಾಗ್ರ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರು. ಮಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿದ್ದಕ್ಕೆ ತಾಯಿಯ ಮೇಲೆ ಹಲ್ಲೆ ನಡೆಸಿ ತೆರಳಿದ್ದಾರೆ. ಅತ್ಯಾಚಾರದ ಬಳಿಕ ಘಟನೆ ಸಂಬಂಧ ದೂರು ದಾಖಲಿಸಿದ್ರೆ ಇಬ್ಬರನ್ನು ಕೊಲೆ ಮಾಡಲಾಗುವುದು ಅಂತಾ ಶಾಸಕರು ಬೆದರಿಕೆ ಹಾಕಿದ್ದರು. ಇತ್ತ ಶಾಸಕನ ದೌರ್ಜನ್ಯದಿಂದ ನಲುಗಿದ ಯುವತಿ ಕುಶಾಗ್ರ ವಿರುದ್ಧ ಪೊಲೀಸರು ಸೂಕ್ತ ತನಿಖೆ ನಡೆಸದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುದಾಗಿ ತಿಳಿಸಿದ್ದಾರೆ.

ತಮ್ಮ ಮೇಲಿನ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕುಶಾಗ್ರ ಸಾಗರ್, ನಮ್ಮ ತಂದೆಯದು ಗ್ರೀನ್ ಪಾರ್ಕ್ ಇದೆ. ನನ್ನ ವಿರುದ್ಧ ದೂರು ದಾಖಲಿಸಿರುವ ಯುವತಿಯ ತಾಯಿ ನಮ್ಮ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ನಾನು ಇದೂವರೆಗೂ ಆ ಯುವತಿಯನ್ನು ನೋಡಿಲ್ಲ. 2014ರಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಅಂದು ಪ್ರಕರಣ ಎಸ್ ಎಸ್ ಪಿ ಮುಂದೆಯೂ ಬಂದಾಗ, ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲ್ ಡಿಟೇಲ್ಸ್, ವಿಡಿಯೋ ಮತ್ತು ಆಡಿಯೋ ಸೇರಿದಂತೆ ಯಾವುದೇ ರೀತಿಯ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ನಂತರ ಯುವತಿ ಮತ್ತು ಆಕೆಯ ತಾಯಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ನನ್ನ ಕುಟುಂಬದಿಂದ ಅವರಿಗೆ 10 ಲಕ್ಷ ರೂ. ಕೊಡಲಾಗಿತ್ತು. ಅಂದು ನಮ್ಮ ತಂದೆಯ ವಿರುದ್ಧವೂ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. ನನ್ನ ರಾಜಕೀಯ ಬೆಳವಣಿಗೆಯನ್ನು ನೋಡಲಾರದೇ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *