ಚಾಮರಾಜನಗರ: ನರಹಂತಕ ಹುಲಿ ಸೆರೆ ಹಿಡಿದ ನಂತರ ಸುತ್ತಲಿನ ಗ್ರಾಮಸ್ಥರು ಸಂತಸದಿಂದ ಪೂಜೆ ನೆರವೇರಿಸಿದ್ದರು. ಇದೀಗ ಚಾಮರಾಜನಗರದಲ್ಲಿ ಹುಲಿ ನಂತರ ಕಾಡಾನೆ ದಾಳಿ ಹೆಚ್ಚಿದ್ದು, ಓರ್ವ ರೈತ ಗಾಯಗೊಂಡಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿ ಬಳಿ ಘಟನೆ ನಡೆದಿದ್ದು, ಶಿವಪುರ ಗ್ರಾಮದ ಮಲ್ಲಮ್ಮನಹುಂಡಿ ಸಿದ್ದಯ್ಯ ಗಾಯಗೊಂಡ ರೈತ. ಜಮೀನಿಗೆ ಹಸು ಮೇಯಿಸಲು ಹೋಗುತ್ತಿದ್ದಾಗ ಆನೆ ದಾಳಿ ನಡೆಸಿದೆ. ತಮಿಳುನಾಡಿನ ಮಧುಮಲೈ ಅರಣ್ಯದಿಂದ ಈ ಆನೆ ಬಂದಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಗಾಯಾಳು ಸಿದ್ದಯ್ಯ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿ ಬಳಿಯ ಕಬ್ಬಿನ ಹೊಲದೊಳಗೆ ಕಾಡಾನೆ ಸೇರಿಕೊಂಡಿದೆ. ಈ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಆನೆ ದಾಳಿಯಿಂದ ಓರ್ವ ರೈತನ ಜೊತೆಗೆ ಎರಡು ಹಸುಗಳು ಗಂಭೀರ ಗಾಯಗೊಂಡಿವೆ. ಆನೆ ನೋಡಲು ಜನ ಮುಗಿಬಿದ್ದಿದ್ದು, ಅರಣ್ಯ ಇಲಾಖೆಯಿಂದ ಆನೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ. ಜನ ಕೇಕೆ ಹಾಗೂ ಗದ್ದಲ ಎಬ್ಬಿಸುತ್ತಿರುವುದರಿಂದ ಆನೆ ಓಡಿಸುವ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ.