ಬೆಂಗಳೂರು: ರಾಜ್ಯಾದ್ಯಂತ ಬಿಜೆಪಿ ಪರಿವರ್ತನಾ ಯಾತ್ರೆ ಹಮ್ಮಿಕೊಂಡಿದ್ದು, ಈ ಸಮಾವೇಶ ಫೆಬ್ರವರಿ 04 ರಂದು ಕೊನೆಗೊಳ್ಳಲಿದೆ. ಪರಿವರ್ತನಾ ಯಾತ್ರೆಯ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಯಾತ್ರೆಯ ಬಳಿಕ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿಯನ್ನು ನಡೆಸುತ್ತಿದೆ.
ಪರಿವರ್ತನಾ ಯಾತ್ರೆ ಬಳಿಕ ರಾಜ್ಯಾದ್ಯಂತ ರಾಜ್ಯ ಮಟ್ಟದ ಒಟ್ಟು 19 ರ್ಯಾಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಫೆಬ್ರವರಿ 27ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ 75ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬೃಹತ್ ಕಿಸಾನ್ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಯಡಿಯೂರಪ್ಪ ಅವರಿಗೆ 75 ವರ್ಷ ಪೂರ್ತಿ ಹಿನ್ನೆಲೆಯಲ್ಲಿ 75 ಸಾವಿರ ರೈತರನ್ನು ಸಮಾವೇಶ ಕರೆತರಲು ಬಿಜೆಪಿ ಸಿದ್ಧತೆ ನಡೆಸಿದೆ.
Advertisement
Advertisement
ಅಲ್ಲದೇ ಫೆಬ್ರವರಿ 4ರ ನಂತರ ಬಿಜೆಪಿ ರಾಜ್ಯದಲ್ಲಿ 19 ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ. ಕೋಲಿ, ಮರಾಠ, ಗೊಲ್ಲರ, ನಾಯಕ ಸೇರಿದಂತೆ ಹಿಂದುಳಿದ ವರ್ಗಗಳ ಸಮುದಾಯದ ಓಬಿಸಿ ಮೋರ್ಚಾ ವತಿಯಿಂದ 8 ರಾಜ್ಯ ಮಟ್ಟದ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
Advertisement
ಎಸ್‍ಸಿ ಮತ್ತು ಎಸ್‍ಟಿ ಸಮುದಾಯದ 5 ರಾಜ್ಯ ಮಟ್ಟದ ಸಮಾವೇಶ, ಸ್ಲಂ ಮೋರ್ಚಾದಿಂದ 1 ರ್ಯಾಲಿ, ಮಹಿಳಾ ಮೋರ್ಚಾದಿಂದ 4 ರಾಜ್ಯ ಮಟ್ಟದ ರ‍್ಯಾಲಿ, ಒಂದು ಬೃಹತ್ ಕಿಸಾನ್ ರ‍್ಯಾಲಿಯನ್ನು ನಡೆಸಲು ಬಿಜೆಪಿ ಸಕಲ ಸಿದ್ಧತೆ ನಡೆಸುತ್ತಿದೆ. ದಾವಣಗೆರೆಯಲ್ಲಿ ನಡೆಯುವ ಬೃಹತ್ ಕಿಸಾನ್ ಸಮಾವೇಶದಲ್ಲಿ ಪ್ರಧಾನಿ ಮೋದಿಜಿ ಭಾಗವಹಿಸುವ ಸಾಧ್ಯತೆಗಳಿವೆ. ಮಾರ್ಚ್ 15ರೊಳಗೆ ಈ ಎಲ್ಲ ಸಮಾವೇಶಗಳು ಮುಗಿಯಲಿವೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.