275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು!

Public TV
2 Min Read
ODISHA GOODS TRAIN

ಭುವನೇಶ್ವರ: ಒಡಿಶಾದ ಬಾಲಸೋರ್ (Balasore Odisha) ನಲ್ಲಿ ನಡೆದ ರೈಲು ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ರೈಲು ಹಳಿ ತಪ್ಪಿದೆ.

ಬರ್ಗರ್ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಸಾಗಿಸುತ್ತಿದ್ದ ಗೂಡ್ಸ್ ಟ್ರೈನ್ (Goods Train) ಹಳಿ ತಪ್ಪಿದೆ. ಈ ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಇದು ಡುಂಗ್ರಿ ಲೈಮ್ ಸ್ಟೋನ್ ಮೈನ್ಸ್ ಮತ್ತು ಬರ್ಗರ್‌ ನಲ್ಲಿರುವ ಎಸಿಸಿ ಸಿಮೆಂಟ್ ಪ್ಲಾಂಟ್ ನಡುವಿನ ಖಾಸಗಿ ನ್ಯಾರೋ ಗೇಜ್ ರೈಲು ಮಾರ್ಗವಾಗಿದೆ.

 

ಘಟನೆಗೆ ಇಂಡಿಯನ್ ರೈಲ್ವೆ ಹೊಣೆಯಲ್ಲ ಎಂದು ಈಸ್ಟ್ ಕೋಸ್ಟ್ ರೈಲ್ವೇ (ಇಸಿಒರ್) ತಿಳಿಸಿದೆ. ಅವರ ಪ್ರಕಾರ ಖಾಸಗಿ ಸಿಮೆಂಟ್ ಕಂಪನಿಯ ಮಾಲೀಕತ್ವದ ಮತ್ತು ನಿರ್ವಹಿಸುವ ನ್ಯಾರೋ ಗೇಜ್ ಸೈಡಿಂಗ್‍ನಲ್ಲಿ ಹಳಿ ತಪ್ಪಿದೆ. ಎಂಜಿನ್, ವ್ಯಾಗನ್‍ಗಳು ಮತ್ತು ನ್ಯಾರೋ ಗೇಜ್ ರೈಲ್ವೇ ಟ್ರ್ಯಾಕ್‍ನಂತಹ ರೋಲಿಂಗ್ ಸ್ಟಾಕ್ ಸೇರಿದಂತೆ ಮೂಲಸೌಕರ್ಯ ನಿರ್ವಹಣೆಯ ಎಲ್ಲಾ ಅಂಶಗಳಿಗೆ ಕಂಪನಿ ಜವಬ್ದಾರಿಯಾಗಿದೆ.

ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ 3 ರೈಲುಗಳಾದ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ ಪ್ರೆಸ್ (Coromandel Express) ಬೆಂಗಳೂರು-ಹೌರಾ ಸೂಪರ್‍ಫಾಸ್ಟ್ ಹಾಗೂ ಗೂಡ್ಸ್ ರೈಲುಗಳ ನಡುವೆ  ಒಡಿಶಾದ ಬಾಲಸೋರ್ ನಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಇದನ್ನು ಭಾರತದಲ್ಲೇ ಸಂಭವಿಸಿದ 3 ಅತ್ಯಂತ ಕೆಟ್ಟ ರೈಲ್ವೆ ಅಪಘಾತಗಳಲ್ಲಿ ಒಂದು ಎಂದು ಹೇಳಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

ಕೋರಮಂಡಲ್ ಎಕ್ಸ್ ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅದರ ಹಲವು ಬೋಗಿಗಳು ಚದುರಿ ಹೋಗಿದ್ದವು. ಇದೇ ವೇಳೆ ಪಕ್ಕದ ಹಳಿಯಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಸೂಪರ್‍ಫಾಸ್ಟ್ ರೈಲಿಗೂ ಬೋಗಿಗಳು ಡಿಕ್ಕಿ ಹೊಡೆದು, ಅದರ ಕೆಲವು ಬೋಗಿಗಳೂ ಹಳಿ ತಪ್ಪಿದ್ದವು. ವರದಿಗಳ ಪ್ರಕಾರ, ಸುಮಾರು 260 ಗಾಯಾಳುಗಳು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಸುಮಾರು 900 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

 

Share This Article