ಮಂಡ್ಯ: ದಶಕಗಳ ಬಳಿಕ ಇದೀಗ ಅವಧಿಗೂ ಮುನ್ನವೇ ಕೆಆರ್ ಎಸ್ ಜಲಾಶಯ ಭರ್ತಿಯಾಗಿದ್ದು, ಕನ್ನಡ ನಾಡಿನ ಜೀವನದಿ ಕಾವೇರಿ ಭೋರ್ಗರೆದು ಹರಿಯುತ್ತಿದ್ದಾಳೆ. ಬತ್ತಿ ಹೋಗಿದ್ದ ಕಾವೇರಿ ಕೊಳ್ಳದ ಭೂಮಿಯೀಗ ಹಸಿರಿನಿಂದ ಕಂಗೊಳಿಸುತ್ತಿದೆ.
ಕೆಲ ವರ್ಷಗಳಿಂದ ಬರಿದಾಗಿದ್ದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬಂದು ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಅವಧಿಗೂ ಮುನ್ನವೇ ಕೆಆರ್‍ಎಸ್ ಭರ್ತಿಯಾಗಿರೋದ್ರಿಂದ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ.
ವಾಡಿಕೆಯಂತೆ ಆಗಸ್ಟ್ ನಲ್ಲಿ ಕೆಆರ್ ಎಸ್ ತುಂಬುವುದು. ಆದರೆ ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಅಂದರೆ ಜುಲೈ ತಿಂಗಳಲ್ಲಿಯೇ ಅಣೆಕಟ್ಟೆ ಭರ್ತಿಯಾಗಿದೆ. ಮೂರು ವರ್ಷಗಳ ಹಿಂದೆ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿತ್ತು. 2014ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು. ಇದೀಗ ಮತ್ತೆ ಅಣೆಕಟ್ಟು ಭರ್ತಿಯಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಅಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗಳಿಗೆ 20 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಕೆಆರ್ ಎಸ್ ಭರ್ತಿಯಾದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಜಲಾಶಯ ವೀಕ್ಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜುಲೈ 20ರಂದು ಕೆಆರ್ ಎಸ್ ಅಣೆಕಟ್ಟುವಿಗೆ ಬಾಗಿನ ಅರ್ಪಿಸಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆದಿದೆ.