ಬೆಂಗಳೂರು: ಲಾಕ್‍ಡೌನ್ ನಿಯಮ ಸಡಿಲಿಸಿ ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಕರ್ನಾಟಕ ಸರ್ಕಾರ ವಿನಾಯಿತಿ ನೀಡಿದೆ. ಸರ್ಕಾರದ ಈ ಮಹತ್ವದ ಗ್ರೀನ್ ಸಿಗ್ನಲ್ ಹಿಂದೆ ಹಣಕಾಸು ಇಲಾಖೆ ಕೆಲಸ ಮಾಡಿದೆ.
ಹೌದು, ಯಾವುದೇ ಯೋಜನೆ ಅಥವಾ ಪ್ರಸ್ತಾಪ ಚರ್ಚೆಗೆ ಬಂದಾಗ ಹಣಕಾಸು ಇಲಾಖೆ ಹಲವು ಪ್ರಸ್ತಾಪಕ್ಕೆ ಆರಂಭದಲ್ಲೇ ಕೊಕ್ಕೆ ಹಾಕಿ ಬಿಡುತ್ತದೆ. ಆದರೆ ಲಾಕ್‍ಡೌನ್ ವಿಚಾರದಲ್ಲಿ ಹಣಕಾಸು ಇಲಾಖೆ ಗಂಭೀರವಾದ ಸಲಹೆ ನೀಡಿದ ಪರಿಣಾಮ ಸರ್ಕಾರ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡಿದೆ.
ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಇಂದು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಹಣಕಾಸು ಇಲಾಖೆ ಶಾಕಿಂಗ್ ವಿಚಾರಗಳನ್ನು ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿನಾಯಿತಿ ನೀಡುವ ನಿರ್ಧಾರ ಪ್ರಕಟವಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ವ್ಯಾಪಾರ ವಹಿವಾಟು ನಡೆಯದ ಕಾರಣ ರಾಜ್ಯದ ಪಾಲಿನ ಜಿಎಸ್‍ಟಿ ಹಣ ಬರುವುದಿಲ್ಲ. ಇನ್ನೂ ನಿರ್ಬಂಧ ಮುಂದುವರಿದರೆ ಜುಲೈವರೆಗೂ ಸಂಕಷ್ಟ ಮುಂದುವರಿಯಲಿದೆ. ಹೀಗಾಗಿ ಗ್ರೀನ್ ಝೋನ್ ನಲ್ಲಿ ಚಟುವಟಿಕೆ ಶುರು ಮಾಡುವುದು ಉತ್ತಮ ಎಂದು ಸಲಹೆ ಬಂದಿದೆ.
ಲಾಕ್‍ಡೌನ್ ಸಡಿಲಿಕೆ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಸರ್ಕಾರ ನಡೆಸುವುದೇ ಕಷ್ಟ. ಲಾಕ್‍ಡೌನ್ ಸಮಯದಲ್ಲಿ ಆದಾಯವಿಲ್ಲದಿದ್ದರೂ ಸರ್ಕಾರದಿಂದ ಉದ್ಯೋಗಿಗಳಿಗೆ ಸಂಬಳ ಸೇರಿದಂತೆ ಇತ್ಯಾದಿಗಳಿಗೆ ಹಣ ಖರ್ಚಾಗುತ್ತಿದ್ದು ಅಂದಾಜು 14 ಸಾವಿರ ಕೋಟಿ ರೂ. ನಷ್ಟವಾಗಿದೆ. ಅಬಕಾರಿ ಇಲಾಖೆ ಒಂದರಿಂದಲೇ 2 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ತಿಂಗಳು ನಿಭಾಯಿಸಿದ್ದೇ ದೊಡ್ಡ ಸಾಧನೆ. ಮಾರ್ಚ್ ಅಂತ್ಯದಲ್ಲಿ ವರ್ಷಾಂತ್ಯದ ಪಾವತಿ ಆಗಬೇಕಿದ್ದ ಬಿಲ್ಲುಗಳನ್ನ ಪೆಂಡಿಂಗ್ ಇಟ್ಟು ಹಣಕಾಸಿನ ಸಮಸ್ಯೆ ಸರಿದೂಗಿಸಲಾಗಿದೆ. ಆದ್ದರಿಂದ ವ್ಯಾಪಾರ ವಹಿವಾಟು ಆರಂಭಿಸಿದರಷ್ಟೇ ಅನುಕೂಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.