ಬೆಂಗಳೂರು: ಮೈತ್ರಿ ಸರ್ಕಾರ ಕುಂಟುತ್ತಿರುವ ಬೆನ್ನಲ್ಲೇ ಇಂದು ನಡೆಯುತ್ತಿರುವ ವಿಧಾನಸಭೆ ಕಲಾಪ ತೀವ್ರ ಕುತೂಹಲ ಕೆರಳಿಸಿದ್ದು, ಸಚಿವ ಜಿ.ಟಿ.ದೇವೇಗೌಡ ಅವರು ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನವೇ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿಯವರು ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಕಲಾಪ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಮುಂದೂಡಲ್ಪಟ್ಟಿತು. ಇತ್ತ ವಿಧಾನಸಭೆಗೆ ಬಹುತೇಕ ನಾಯಕರು ಕಲಾಪಕ್ಕೆ ಆಗಮಿಸಿರಲಿಲ್ಲ.
ಸಚಿವ ಜಿ.ಟಿ.ದೇವೇಗೌಡ ಅವರು ಬಿಜೆಪಿ ಸೇರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ‘ಕಮ್ ಬ್ಯಾಕ್ ಜಿಟಿಡಿ’ ಎಂಬ ಅಭಿಯಾನ ಪ್ರಾರಂಭವಾಗಿರುವ ಬೆನ್ನಲ್ಲೇ ಜಿಟಿಡಿ ಬಿಜೆಪಿ ನಾಯಕರಾದ ಎಸ್.ಆರ್.ವಿಶ್ವನಾಥ್, ಶ್ರೀರಾಮುಲು ಜೊತೆ ಮಾತುಕತೆಯಲ್ಲಿ ತೊಡಗಿದ್ದರು.
ಸಚಿವ ಜಿ.ಟಿ ದೇವೇಗೌಡ ಬಿಜೆಪಿ ಸೇರುವ ಕುರಿತು ಅವರ ಅಭಿಮಾನಿಗಳು ಪೋಸ್ಟ್ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿಗೆ ಬರುತ್ತಿರುವ ಸಚಿವ ಜಿಟಿ ದೇವೇಗೌಡರಿಗೆ ಸ್ವಾಗತ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚಿ ಬಿಜೆಪಿಗೆ ಜಿಟಿಡಿ ಆಗಮಿಸುತ್ತಿದ್ದಾರೆ. ಹೀಗೆಂದು ಕೆಲ ಬಿಜೆಪಿ ಕಾರ್ಯಕರ್ತರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮೇಲೆ ಪೋಸ್ಟ್ ಹಾಕುತ್ತಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಅಪ್ಪ-ಮಕ್ಕಳ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿ ಬರುತ್ತಿರುವ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಸ್ವಾಗತ. ‘ಕಮ್ ಬ್ಯಾಕ್ ಜಿಟಿಡಿ’ ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ಅವರು ದೇಶಕ್ಕೆ ನೀಡುತ್ತಿರುವ ಅಪಾರ ಯೋಜನೆಗಳನ್ನು ಇಷ್ಟಪಟ್ಟು ಬಿಜೆಪಿಗೆ ಸೇರುತ್ತಿರುವ ಜಿಟಿಡಿ ಅವರಿಗೆ ಸುಸ್ವಾಗತ.
ನಿಮ್ಮ ಪುತ್ರ ಹರೀಶ್‍ಗೌಡ ಅವರಿಗೆ ಚುನಾವಣೆಗೆ ಟಿಕೆಟ್ ನೀಡದ ಜೆಡಿಎಸ್ ಪಕ್ಷ ಇದ್ದು ಸತ್ತಂತೆ. ಬಿಜೆಪಿಗೆ ಬಂದು ತಮ್ಮ ಚಾಮುಂಡೇಶ್ವರಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕೆಂದು ಬಿಜೆಪಿಗೆ ಬರುತ್ತಿರುವ ಜಿಟಿಡಿ ಅವರಿಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.