ಸೇನಾ ವಾಪಸಾತಿ ಬಳಿಕ ಗಡಿಯಲ್ಲಿ ದೀಪಾವಳಿ ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು

Public TV
1 Min Read
Indian Chinese Troops

ನವದೆಹಲಿ: ಭಾರತೀಯ ಮತ್ತು ಚೀನಾದ ಸೈನಿಕರು ಲಡಾಖ್‌ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆಯ ಏಳು ಸ್ಥಳಗಳಲ್ಲಿ ದೀಪಾವಳಿ ಪ್ರಯುಕ್ತ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು.

ಕಳೆದ ವಾರ ಗಸ್ತು ಒಪ್ಪಂದಕ್ಕೆ ಅನುಗುಣವಾಗಿ ಡೆಪ್ಸಾಂಗ್‌ ಮತ್ತು ಡೆಮ್‌ಚೋಕ್‌ ಪ್ರದೇಶಗಳಿಂದ ಉಭಯ ದೇಶಗಳು ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡುವ ಒಪ್ಪಂದ ಯಶಸ್ವಿಯಾದ ಹಿನ್ನೆಲೆ ಎರಡೂ ದೇಶಗಳ ಸೈನಿಕರು ಪರಸ್ಪರ ದೀಪಾವಳಿ ಸಿಹಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದರು.

908497 modi xi file

ಲಡಾಖ್‌ನ ಚುಶುಲ್ ಮಾಲ್ಡೊ ಮತ್ತು ದೌಲತ್ ಬೇಗ್ ಓಲ್ಡಿ, ಅರುಣಾಚಲ ಪ್ರದೇಶದ ಬಂಚಾ (ಕಿಬುಟು ಬಳಿ) ಮತ್ತು ಬುಮ್ಲಾ ಮತ್ತು ಸಿಕ್ಕಿಂನ ನಾಥುಲಾದಲ್ಲಿ ಸಿಹಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ಡೆಪ್ಸಾಂಗ್ ಬಯಲು ಪ್ರದೇಶಗಳು ಮತ್ತು ಡೆಮ್‌ಚೋಕ್‌ನಿಂದ ತಾತ್ಕಾಲಿಕ ಶಿಬಿರಗಳನ್ನು ಒಳಗೊಂಡಂತೆ ಮಿಲಿಟರಿ ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ತೆಗೆದುಹಾಕಲು ಮತ್ತು 2020 ರ ಏಪ್ರಿಲ್‌ನ ಪೂರ್ವದ ಸ್ಥಾನಗಳಿಗೆ ತಮ್ಮ ತಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

2020ರ ಮೇ ಮತ್ತು ಜೂನ್‌ ತಿಂಗಳಲ್ಲಿ ಪ್ಯಾಂಗೊಂಗ್ ಸರೋವರ ಮತ್ತು ಗಾಲ್ವಾನ್ ಪ್ರದೇಶಗಳಲ್ಲಿ ಘರ್ಷಣೆಗಳು ನಡೆದಿದ್ದವು. ಸುಮಾರು ನಾಲ್ಕು ವರ್ಷಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಈಗ ಕೊನೆಗೊಂಡಿದೆ.

Share This Article