ಹೈದರಾಬಾದ್: ವಿಶೇಷ ಕಥಾವಸ್ತು ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ತಮ್ಮ ಮುಂದಿನ ಚಿತ್ರದಲ್ಲಿ ಹಿರಿಯ ನಟಿ `ಭಾನುಮತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ನಟಿ ಸಾವಿತ್ರಿ ಅವರ ಜೀವನ ಆಧಾರಿತ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. ಹಿರಿಯ ನಟಿ ಸಾವಿತ್ರಿ ಪಾತ್ರಕ್ಕೆ ಕೀರ್ತಿ ಸುರೇಶ್ ಬಣ್ಣ ಹಚ್ಚಲಿದ್ದಾರೆ. ಸಾವಿತ್ರಿಯವರ ಸಮಕಾಲಿನ ನಟಿ ಭಾನುಮತಿ. ಇವರಿಬ್ಬರ ನಡುವಿನ ಸನ್ನೀವೇಶಗಳು ಚಿತ್ರದಲ್ಲಿರಲಿವೆ ಎಂದು ಹೇಳಲಾಗುತ್ತಿದ್ದು, ಭಾನುಮತಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿ ಬಂದಿದೆ. ಈ ಕುರಿತು ಅನುಷ್ಕಾ ಅವರಿಂದ ಸ್ಪಷ್ಟನೆ ಲಭಿಸಬೇಕಿದೆ.
ಸಾವಿತ್ರಿ ಹಾಗೂ ಭಾನುಮತಿ ಇಬ್ಬರು ಒಂದೇ ಕಾಲಮಾನದ ಸ್ಟಾರ್ ನಟಿಯರು. ಅಲ್ಲದೇ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು ಎನ್ನಲಾಗಿದೆ. ಇವರಿಬ್ಬರ ಬಾಂಧವ್ಯವೇ ಚಿತ್ರದ ತಿರುಳು ಎನ್ನಲಾಗಿದೆ. ಚಿತ್ರವು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ತಯಾರಾಗುತ್ತಿದೆ.
ಚಿತ್ರದಲ್ಲಿ ಹಲವು ಸ್ಟಾರ್ ನಟರು ಅಭಿನಯಿಸುತ್ತಿದ್ದು, ಮೋಹನ್ ಬಾಬು, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಶಾಲಿನಿ ಪಾಂಡೆ, ವಿಕ್ರಮ್ ಪ್ರಭು ಪ್ರಮುಖ ನಟರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಮಾರ್ಚ್ ಕೊನೆಯ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.